ADVERTISEMENT

IND vs ENG | ಇಂಗ್ಲೆಂಡ್ ಹೋರಾಟಕ್ಕೆ ಡಕೆಟ್ ಶತಕ ಬಲ

ಟೆಸ್ಟ್: ಪದಾರ್ಪಣೆ ಪಂದ್ಯದಲ್ಲಿ ಗಮನ ಸೆಳೆದ ಧ್ರುವ ಜುರೇಲ್; ಅಶ್ವಿನ್‌ಗೆ ಐದನೂರನೇ ವಿಕೆಟ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
<div class="paragraphs"><p>ಇಂಗ್ಲೆಂಡ್ ತಂಡದ ಬ್ಯಾಟರ್ ಬೆನ್ ಡಕೆಟ್ ಶತಕ ಸಂಭ್ರಮ ಆಚರಿಸುವುದನ್ನು ನೋಡುತ್ತ ನಿಂತಿರುವ ಭಾರತದ ಬೌಲರ್ ಮೊಹಮ್ಮದ್ ಸಿರಾಜ್&nbsp;</p></div>

ಇಂಗ್ಲೆಂಡ್ ತಂಡದ ಬ್ಯಾಟರ್ ಬೆನ್ ಡಕೆಟ್ ಶತಕ ಸಂಭ್ರಮ ಆಚರಿಸುವುದನ್ನು ನೋಡುತ್ತ ನಿಂತಿರುವ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ 

   

–ಪಿಟಿಐ ಚಿತ್ರ

ರಾಜ್‌ಕೋಟ್: ಪ್ರಸ್ತುತ ಇಂಗ್ಲೆಂಡ್‌ನ ಬ್ಯಾಟರ್‌ಗಳು ಯಾವುದೇ ಇನಿಂಗ್ಸ್‌ನಲ್ಲಿ ಆಕ್ರಮಣಶೀಲವಾಗಿ ‘ಬಾಝ್‌ಬಾಲ್‌‘ ತಂತ್ರವನ್ನು ಜಾರಿಗೆ ತರುವಲ್ಲಿ ಸಿದ್ಧಹಸ್ತರಾಗಿದ್ದಾರೆ.

ADVERTISEMENT

ಶುಕ್ರವಾರ ಇಂಗ್ಲೆಂಡ್ ಬ್ಯಾಟರ್‌ ಬೆನ್ ಡಕೆಟ್‌ ಕೂಡ ಸುಲಭ ಮಾರ್ಗಗಳನ್ನು ಬಿಟ್ಟು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಬೆನ್ ಅವರು ನವಯುಗದ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳನ್ನು ಮೈಗೂಡಿಸಿಕೊಂಡಿರುವುದನ್ನು ಇಲ್ಲಿ ತೋರಿಸಿದರು. ಒಂದು ದಶಕದಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿರುವ ಡಕೆಟ್ ಹೊಸತನಕ್ಕೂ ಒಗ್ಗಿಕೊಂಡಿದ್ದಾರೆ.

ಕೆಂಟ್‌ ಮೂಲದವರಾದ ಡಕೆಟ್‌ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿ 118 ಎಸೆತಗಳಲ್ಲಿ  ಅಜೇಯ 133 ರನ್‌ ಗಳಿಸಿದರು. ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 445 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ದಿನದಾಟದ ಕೊಎಗೆ 35 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 207 ರನ್‌ ಗಳಿಸಲು ಡಕೆಟ್ ಕಾಣಿಕೆಯೇ ಮಹತ್ವದ್ದಾಗಿದೆ. ಡಕೆಟ್ ಮತ್ತು ಜೋ ರೂಟ್ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ.

ಎಡಗೈ ಬ್ಯಾಟರ್ ಡಕೆಟ್ 2016ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದವರು. ಇದು ಅವರ ಮೂರನೇ ಶತಕವಾಗಿದೆ. ಅವರ ಬ್ಯಾಟಿಂಗ್‌ನಲ್ಲಿ ವೇಗ, ನಿಖರತೆ ಮತ್ತು ಆಕ್ರಮಣಶೀಲತೆ ಮೇಳೈಸಿದ್ದವು. ಡ್ರೈವ್‌, ಸ್ವೀಪ್, ರಿವರ್ಸ್ ಸ್ವೀಪ್‌ಗಳ ಮೂಲಕ ರನ್‌ಗಳನ್ನು ಗಳಿಸಿದರು.  ವೇಗಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್, ರವೀಂದ್ರ ಜಡೇಜ ಹಾಗೂ ಕುಲದೀಪ್ ಯಾದವ್‌ ಅವರು ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನೂ ಪ್ರಯೋಗಿಸಿದರು. ಆದರೆ ಡಕೆಟ್ ಜಗ್ಗಲಿಲ್ಲ. 29 ವರ್ಷದ ಡಕೆಟ್ ಆಟದ ಮುಂದೆ ಭಾರತವು ಗಳಿಸಿರುವ ಮೊತ್ತವೂ ಕಡಿಮೆಯಾಯಿತೇ ಎಂಬ ಸಂದೇಹ ಕೂಡ ಇಣುಕುತ್ತಿದೆ. 

ಆತಿಥೇಯ ನಾಯಕ ರೋಹಿತ್ ಶರ್ಮಾ ಅವರ ತಂತ್ರಗಳನ್ನು ಡಕೆಟ್ ವಿಫಲಗೊಳಿಸಿದರು. ಎಡಗೈ ಸ್ಪಿನ್ನರ್ ಯಾದವ್ ಆರು ಓವರ್‌ಗಳಲ್ಲಿ 42 ರನ್‌ಗಳನ್ನು ಕೊಟ್ಟರು. ಫೀಲ್ಡಿಂಗ್ ಬದಲಾವಣೆಗಳ ತಂತ್ರಗಳೂ ವಿಫಲವಾದವು.

ಡಕೆಟ್ 39 ಎಸೆತಗಳಲ್ಲಿ ಅರ್ಧಶತಕ ದಾಟಿದರು.  ಡಕೆಟ್ ಮತ್ತು ಜ್ಯಾಕ್‌ ಕ್ರಾಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ  89 ರನ್‌ ಸೇರಿಸಿದರು. 14ನೇ ಓವರ್‌ನಲ್ಲಿ ಅಶ್ವಿನ್ ಎಸೆತವನ್ನು ಆಡುವ ಭರದಲ್ಲಿ ಜ್ಯಾಕ್ ಅವರು ರಜತ್ ಪಾಟೀದಾರ್‌ಗೆ ಕ್ಯಾಚಿತ್ತರು. ಅಶ್ವಿನ್ 500 ವಿಕೆಟ್‌ ಸರದಾರರ ಸಾಲಿಗೆ ಸೇರಿದರು.

ಆದರೆ ಬಂಡೆಗಲ್ಲಿನಂತೆ ನಿಂತಿದ್ದ ಡಕೆಟ್ ಎರಡನೇ ವಿಕೆಟ್ ಜೊತೆಯಾಟದಲ್ಲಿ ಓಲಿ ‍ಪೋಪ್ ಅವರೊಂದಿಗೆ 93 ರನ್‌ ಸೇರಿಸಿದರು. ಸಿರಾಜ್ ನೇರ ಎಸೆತವನ್ನು ರಕ್ಷಣಾತ್ಮಕವಾಗಿ ಆಡುವಲ್ಲಿ ಎಡವಿದ ಪೋಪ್ ಎಲ್‌ಬಿಡಬ್ಲ್ಯು ಬಲೆಗೆ ಬೀಳುವುದರೊಂದಿಗೆ ಜೊತೆಯಾಟಕ್ಕೆ ತೆರೆಬಿತ್ತು.  90 ರನ್‌ಗಳನ್ನು ದಾಟಿದ ಮೇಲೆ ತಮ್ಮ ಆಟದ ವೇಗವನ್ನು ಡಕೆಟ್ ಕಡಿಮೆಗೊಳಿಸಿಕೊಂಡರು. 26ನೇ ಓವರ್‌ನಲ್ಲಿ ಶತಕದ (88 ಎಸೆತ) ಗಡಿ ಮುಟ್ಟಿದರು.  

ಧ್ರುವ ಜುರೇಲ್ ಮಿಂಚು

ಪಂದ್ಯದ ಮೊದಲ ದಿನವಾದ ಗುರುವಾರ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 5 ವಿಕೆಟ್‌ಗಳಿಗೆ 326 ರನ್ ಗಳಿಸಿತ್ತು. ಈ ಮೊತ್ತಕ್ಕೆ ಮತ್ತೆ 119 ರನ್‌ ಸೇರ್ಪಡೆಯಾಗಲು ಪದಾರ್ಪಣೆಯ ಪಂದ್ಯವಾಡಿದ ಧ್ರುವ ಜುರೇಲ್ (46; 104ಎ, 4X2, 6X3) ಬ್ಯಾಟಿಂಗ್ ಕಾರಣವಾಯಿತು. ಅವರೊಂದಿಗೆ ಆಶ್ವಿನ್ (26; 28ಎ, 4X3, 6X1) ಕೂಡ ಕಾಣಿಕೆ ನೀಡಿದರು.

ಆಗ್ರಾದ 23 ವರ್ಷದ ಜುರೇಲ್ ಚೆಂದದ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದರು. ಆದರೆನಾಲ್ಕು ರನ್‌ಗಳ ಅಂತರದಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸುವ ಅವಕಾಶ ತಪ್ಪಿಸಿಕೊಂಡರು.

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಸರ್ಫರಾಜ್ ಖಾನ್ ಗುರುವಾರ ಅರ್ಧಶತಕ ಹೊಡೆದಿದ್ದರು.

ಮೊದಲ ದಿನ ಶತಕ ಗಳಿಸಿದ್ದ ಜಡೇಜ (110 ರನ್) ಮತ್ತು ಕುಲದೀಪ್ ಯಾದವ್ (1 ರನ್) ಕ್ರೀಸ್‌ನಲ್ಲಿದ್ದರು. ಶುಕ್ರವಾರ ಬೆಳಿಗ್ಗೆ ಆಟ ಮುಂದುವರಿಸಿದ ಜಡೇಜ ತಮ್ಮ ಮೊತ್ತಕ್ಕೆ ನಾಲ್ಕು ರನ್‌ ಸೇರಿಸಿ ಔಟಾದರು. ಕುಲದೀಪ್ ಕೂಡ ಬೇಗನೇ ನಿರ್ಗಮಿಸಿದರು.

ಭಾರತಕ್ಕೆ 5 ರನ್ ದಂಡ

ಭಾರತದ ಬ್ಯಾಟರ್‌ಗಳು ಪಿಚ್‌ನ ಮಧ್ಯಭಾಗದಲ್ಲಿ ಓಡಾಡಿದ್ದಕ್ಕಾಗಿ ತಂಡಕ್ಕೆ ಐದು ರನ್‌ಗಳ ದಂಡ ವಿಧಿಸಲಾಯಿತು. ಇದರಿಂದಾಗಿ ಇಂಗ್ಲೆಂಡ್ ತಂಡದ ಖಾತೆಗೆ ಐದು ರನ್‌ಗಳು ಸೇರಿದವು.

ಶುಕ್ರವಾರ ಅಶ್ವಿನ್ ಅವರು ಬ್ಯಾಟಿಂಗ್ ಮಾಡುವಾಗ ಪಿಚ್‌ ಮಧ್ಯದಲ್ಲಿ ಓಡಾಡಿದಾಗ ಅಂಪೈರ್ ಜೋಯೆಲ್ ವಿಲ್ಸನ್ ಎಚ್ಚರಿಕೆ ನೀಡಿದರು. 102ನೇ ಓವರ್‌ ಸಂದರ್ಭದಲ್ಲಿ ಅಶ್ವಿನ್ ಅವರೊಂದಿಗೆ ವಿಲ್ಸನ್ ಮಾತನಾಡಿದರು. ಇದಕ್ಕೂ ಮುನ್ನ ರವೀಂದ್ರ ಜಡೇಜಾ ಅವರೂ ಕೂಡ ಇದೇ ತಪ್ಪಿಗೆ ಎಚ್ಚರಿಕೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.