ADVERTISEMENT

ದುಲೀಪ್‌ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ತಲೆಗೆ ಪೆಟ್ಟು; ಅಂಗಣಕ್ಕಿಳಿಯದ ಅಯ್ಯರ್

ಕ್ರಿಕೆಟ್‌: ಕೇಂದ್ರ ವಲಯ vs ಪಶ್ಚಿಮ ವಲಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2022, 10:21 IST
Last Updated 17 ಸೆಪ್ಟೆಂಬರ್ 2022, 10:21 IST
ಆಲ್ರೌಂಡರ್‌ ವೆಂಕಟೇಶ್ ಅಯ್ಯರ್‌
ಆಲ್ರೌಂಡರ್‌ ವೆಂಕಟೇಶ್ ಅಯ್ಯರ್‌   

ಕೊಯಮತ್ತೂರು:ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಸೆಮಿಫೈನಲ್‌ ಪಂದ್ಯದಲ್ಲಿಕೇಂದ್ರ ವಲಯ ತಂಡದ ಆಲ್ರೌಂಡರ್‌ ವೆಂಕಟೇಶ್ ಅಯ್ಯರ್‌ ಅವರ ತಲೆಗೆ ಚೆಂಡು ಬಡಿದಿದೆ. ಹೀಗಾಗಿ ಅವರು ಮೂರನೇ ದಿನ ಮೈದಾನಕ್ಕೆ ಇಳಿದಿಲ್ಲ. ಅವರ ಬದಲು ಅಶೋಕ್‌ ಮನೇರಿಯಾ ಫೀಲ್ಡಿಂಗ್‌ ಮಾಡುತ್ತಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ವೇಳೆ ಪಶ್ಚಿಮ ವಲಯ ತಂಡದ ಬೌಲರ್‌ ಚಿಂತನ್‌ ಗಜ ಅವರು ಥ್ರೋ ಮಾಡಿದ ಚೆಂಡು ಅಯ್ಯರ್‌ ತಲೆಗೆ ಬಡಿದಿತ್ತು.

ಅವರನ್ನು ಕರೆದೊಯ್ಯಲು ಆಂಬುಲೆನ್ಸ್‌ಅನ್ನು ಮೈದಾನದ ಮಧ್ಯಕ್ಕೆ ತರಲಾಗಿತ್ತು. ಆದರೆ ಅಲ್ಪ ಚೇತರಿಸಿಕೊಂಡ ಅಯ್ಯರ್‌, ನಡೆದುಕೊಂಡೇ ಅಂಗಳದಿಂದ ಹೊರಬಂದರು. ಅವರು ಮತ್ತೆ ಬ್ಯಾಟ್‌ ಮಾಡಲು ಬಂದರಾದರೂ 14 ರನ್‌ ಗಳಿಸಿ ಔಟಾದರು.

ADVERTISEMENT

ಘಟನೆ ಕುರಿತು ಮಾತನಾಡಿರುವ ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ (ಟಿಎನ್‌ಸಿಎ) ಅಧಿಕಾರಿಯೊಬ್ಬರು, 'ಅವರ (ವೆಂಕಟೇಶ್‌ ಅಯ್ಯರ್‌) ಜೊತೆ ಮಾತನಾಡಿದ್ದೇವೆ. ಸದ್ಯ ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಶ್ಚಿಮ ವಲಯ ತಂಡ 257 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಕೇಂದ್ರ ವಲಯ 128 ರನ್‌ ಗಳಿಗೆ ಸರ್ವಪತನ ಕಂಡಿತ್ತು. ಸದ್ಯ ಎರಡನೇ ಇನಿಂಗ್ಸ್‌ ಆರಂಭಿಸಿರುವ ಪಶ್ಚಿಮ ವಲಯ ಪೃಥ್ವಿ ಶಾ (142) ಶತಕದ ಬಲದಿಂದ 7 ವಿಕೆಟ್ ನಷ್ಟಕ್ಕೆ 336 ರನ್ ಕಲೆಹಾಕಿದೆ. ಇದರೊಂದಿಗೆ 465 ರನ್‌ಗಳ ಮುನ್ನಡೆ ಸಾಧಿಸಿದೆ.

ಪಶ್ಚಿಮ ವಲಯ ತಂಡವನ್ನು ಅಜಿಂಕ್ಯ ರಹಾನೆ ಮತ್ತು ಕೇಂದ್ರ ವಲಯವನ್ನು ಕರಣ್‌ ಶರ್ಮಾ ಮುನ್ನಡೆಸುತ್ತಿದ್ದಾರೆ.

ಸೇಲಂನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿದಕ್ಷಿಣ ವಲಯ ಹಾಗೂ ಉತ್ತರ ವಲಯ ತಂಡಗಳು ಸೆಣಸಾಟ ನಡೆಸುತ್ತಿವೆ. ದಕ್ಷಿಣ ವಲಯ ತಂಡ 458 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಫೈನಲ್‌ ಪಂದ್ಯವು ಸೆಪ್ಟೆಂಬರ್‌ 21ರಿಂದ 25ರ ವರೆಗೆ ಕೊಯಮತ್ತೂರಿನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.