ADVERTISEMENT

ದುಲೀಪ್ ಟ್ರೋಫಿ: ಹಿಡಿತ ಸಾಧಿಸಿದ ಭಾರತ ‘ಡಿ’

ರಿಕಿ ಭುಯಿ ಅಜೇಯ 90

ಪಿಟಿಐ
Published 21 ಸೆಪ್ಟೆಂಬರ್ 2024, 14:41 IST
Last Updated 21 ಸೆಪ್ಟೆಂಬರ್ 2024, 14:41 IST
ರಿಕಿ ಭುಯಿ
ಸಂಗ್ರಹ ಚಿತ್ರ
ರಿಕಿ ಭುಯಿ ಸಂಗ್ರಹ ಚಿತ್ರ   

ಅನಂತಪುರ: ಬ್ಯಾಟರ್‌ ರಿಕಿ ಭುಯಿ ಅವರು ಸತತ ಎರಡನೇ ಶತಕದಿಂದ ಕೇವಲ 10 ರನ್ ದೂರವಿದ್ದಾರೆ. ಭಾರತ ‘ಡಿ’ ತಂಡ ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ‘ಬಿ’ ವಿರುದ್ಧ ಮೂರನೇ ದಿನವಾದ ಶನಿವಾರ ಒಟ್ಟಾರೆ ಮುನ್ನಡೆಯನ್ನು 311 ರನ್‌ಗಳಿಗೆ ಹೆಚ್ಚಿಸಿದೆ.

ರನ್‌ ಬರ ಎದುರಿಸುತ್ತಿರುವ ಶ್ರೇಯಸ್ ಅಯ್ಯರ್ ಸಮಾಧಾನ ಎಂಬಂತೆ ಅರ್ಧ ಶತಕ (40 ಎಸೆತಗಳಲ್ಲಿ 50) ಗಳಿಸಿದರು. ದಿನದಾಟದ ಕೊನೆಗೆ ಭುಯಿ, 87 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದ್ದು ಇದರಲ್ಲಿ 10 ಬೌಂಡರಿಗಳ ಜೊತೆ ಮೂರು ಸಿಕ್ಸರ್‌ಗಳಿವೆ. ಭಾರತ ಡಿ ಎರಡನೇ ಇನಿಂಗ್ಸ್‌ನಲ್ಲಿ್ 5 ವಿಕೆಟ್‌ಗೆ 244 ರನ್ ಗಳಿಸಿದೆ.

ಇದಕ್ಕೆ ಮೊದಲು, ಭಾರತ ‘ಡಿ’ ತಂಡದ 349 ರನ್‌ಗಳ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಶುಕ್ರವಾರ 6 ವಿಕೆಟ್‌ಗೆ 210 ರನ್ ಗಳಿಸಿದ್ದ ‘ಬಿ’ ತಂಡದ ಮೊತ್ತ 282 ರನ್‌ಗಳವರೆಗೆ ಬೆಳೆಯಿತು. ವಾಷಿಂಗ್ಟನ್ ಸುಂದರ್ 87 ರನ್‌ ಗಳಿಸಿ ಜೊತೆಗಾರರಿಲ್ಲದೇ ಮರಳಿದರು. ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ 73 ರನ್ನಿಗೆ 5 ವಿಕೆಟ್ ಪಡೆದರು.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಭಾರತ ಡಿ 18 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆದರೆ ಅಯ್ಯರ್ ಮತ್ತು ಭುಯಿ 75 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರುಮಾಡಿದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್‌: ಭಾರತ ‘ಡಿ’: 349; ಭಾರತ ‘ಬಿ’: 76.2 ಓವರುಗಳಲ್ಲಿ 282 (ಅಭಿಮನ್ಯು ಈಶ್ವರನ್ 116, ವಾಷಿಂಗ್ಟನ್ ಸುಂದರ್ 87; ಸೌರಭ್ ಕುಮಾರ್ 73ಕ್ಕೆ5, ಅರ್ಷದೀಪ್ ಸಿಂಗ್ 30ಕ್ಕೆ3); ಎರಡನೇ ಇನಿಂಗ್ಸ್‌: ಭಾರತ ‘ಡಿ’: 44 ಓವರುಗಳಲ್ಲಿ 5 ವಿಕೆಟ್‌ಗೆ 244 (ರಿಕಿ ಭುಯಿ ಬ್ಯಾಟಿಂಗ್ 90, ಶ್ರೇಯಸ್‌ ಅಯ್ಯರ್ 50, ಸಂಜು ಸ್ಯಾಮ್ಸನ್ 45; ಮುಕೇಶ್ ಕುಮಾರ್‌ 80ಕ್ಕೆ3, ನವದೀಪ್ ಸೈನಿ 40ಕ್ಕೆ2);

ಮಿಂಚಿದ ಪರಾಗ್‌ ಶಾಶ್ವತ್‌: ಭಾರತ ‘ಎ’ ಮೇಲುಗೈ

ಅನಂತರಪುರ (ಪಿಟಿಐ): ರಿಯಾನ್ ಪರಾಗ್ ಮತ್ತು ಶಾಶ್ವತ್ ರಾವತ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ‘ಎ’ ತಂಡ ದುಲೀಪ್ ಟ್ರೊಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ‘ಸಿ’ ವಿರುದ್ಧ ನಾಲ್ಕು ದಿನಗಳ ಪಂದ್ಯದ ಮೂರನೇ ದಿನವಾದ ಶನಿವಾರ ಮೇಲುಗೈ ಸಾಧಿಸಿತು. ಭಾರತ ‘ಎ’ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 270 ರನ್ ಗಳಿಸಿದೆ. ಒಟ್ಟಾರೆ ಮುನ್ನಡೆ 333 ರನ್‌ಗಳಿಗೆ ಉಬ್ಬಿದೆ. ಪರಾಗ್ 101 ಎಸೆತಗಳಲ್ಲಿ 73 ರನ್ ಗಳಿಸಿದರೆ ಮೊದಲ ಇನಿಂಗ್ಸ್‌ನ ಶತಕ ವೀರ ಶಾಶ್ವತ್ ರಾವತ್ 67 ಎಸೆತಗಳಲ್ಲಿ ಆಕರ್ಷಕ ಹೊಡೆತಗಳಿಂದ ಕೂಡಿದ 53 ರನ್ ಬಾರಿಸಿದರು. ಐದನೇ ವಿಕೆಟ್‌ಗೆ ಇವರಿಬ್ಬರು 105 ರನ್ ಸೇರಿಸಿದರು. ನಾಯಕ ಮಯಂಕ್ ಅಗರವಾಲ್ ಸೊಗಸಾದ 34 ರನ್ ಗಳಿಸಿದರು. ಸ್ಟಂಪ್ಟ್‌ ವೇಳೆ ವಿಕೆಟ್‌ ಕೀಪರ್ ಕುಮಾರ ಕುಶಾಗ್ರ ಅಜೇಯ 40 ರನ್ ಮತ್ತು ತನುಷ್ಯ ಕೋಟ್ಯಾನ್ ಅಜೇಯ 13 ರನ್ ಗಳಿಸಿದ್ದಾರೆ. ಇದಕ್ಕೆ ಮೊದಲು ‘ಎ’ ತಂಡದ 297 ರನ್‌ಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ 7 ವಿಕೆಟ್‌ಗೆ 216 ರನ್ ಗಳಿಸಿದ್ದ ಭಾರತ ‘ಸಿ’ 234 ರನ್‌ಗಳಿಗೆ (71 ಒವರ್‌) ಆಲೌಟಾಯಿತು. ಆವೇಶ್ ಖಾನ್ ಮತ್ತು ಅಕಿಬ್ ಖಾನ್ ತಲಾ ಮೂರು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರುಗಳು: ಮೊದಲ ಇನಿಂಗ್ಸ್‌: ಭಾರತ ‘ಎ’: 297; ಭಾರತ ಸಿ: 234; ಎರಡನೇ ಇನಿಂಗ್ಸ್‌: ಭಾರತ ‘ಎ’: 64 ಓವರುಗಳಲ್ಲಿ 6ಕ್ಕೆ 270 (ರಿಯಾನ್ ಪರಾಗ್ 73 ಶಾಶ್ವತ್ ರಾವತ್ 53).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.