ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಮುಷೀರ್ ಶತಕ ಸೂಪರ್!

ಖಾನ್– ನವದೀಪ್ ಸೈನಿ ಜೊತೆಯಾಟ

ಗಿರೀಶ ದೊಡ್ಡಮನಿ
Published 6 ಸೆಪ್ಟೆಂಬರ್ 2024, 0:18 IST
Last Updated 6 ಸೆಪ್ಟೆಂಬರ್ 2024, 0:18 IST
ಭಾರತ ಬಿ ತಂಡದ ಮುಷೀರ್ ಖಾನ್ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಸಂಭ್ರಮಿಸಿದರು   –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.
ಭಾರತ ಬಿ ತಂಡದ ಮುಷೀರ್ ಖಾನ್ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಸಂಭ್ರಮಿಸಿದರು   –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.   

ಬೆಂಗಳೂರು: ಮುಂಬೈ ಹುಡುಗ ಮುಷೀರ್ ಖಾನ್‌ ಅವರಿಗೆ ಇನ್ನಷ್ಟೇ 20 ವರ್ಷ ವಯಸ್ಸು  ತುಂಬಬೇಕಷ್ಟೇ. ಆದರೆ ಹಲವು ವರ್ಷ ಆಡಿರುವ ಅನುಭವಿಗಳಿಗೆ ಇರುವಷ್ಟೇ ಪ್ರಬುದ್ಧತೆ ಈ ಹುಡುಗನ ಆಟದಲ್ಲಿದೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ದಾಖಲಿಸಿದ ಶತಕವೇ ಈ ಮಾತಿಗೆ ಸಾಕ್ಷಿ.

ಇಲ್ಲಿ ಆರಂಭವಾದ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ 94 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಭಾರತ ಬಿ ತಂಡವು 79 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 202 ರನ್‌ ಗಳಿಸಲು ಕಾರಣರಾಗಿದ್ದು ಮುಷೀರ್.

ಶುಭಮನ್ ಗಿಲ್ ನಾಯಕತ್ವದ ಭಾರತ ಎ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ಯೋಜನೆಯನ್ನು ಬೌಲರ್‌ಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದರು. ಮಧ್ಯಮವೇಗಿಗಳಾದ ಖಲೀಲ್ ಅಹಮದ್, ಆಕಾಶದೀಪ್ ಮತ್ತು ಆವೇಶ್ ಖಾನ್ ತಲಾ ಎರಡು ವಿಕೆಟ್ ಗಳಿಸಿದರು. ಆರಂಭಿಕ ಬ್ಯಾಟರ್, ನಾಯಕ ಅಭಿಮನ್ಯು ಈಶ್ವರನ್ (13; 42ಎಸೆತ) 13ನೇ ಓವರ್‌ನಲ್ಲಿ ಔಟಾದಾಗ ಕ್ರೀಸ್‌ಗೆ ಬಂದ ಮುಷೀರ್ ತಾಳ್ಮೆಯಿಂದ ಬ್ಯಾಟ್ ಬೀಸಿದರು. ರನ್‌ ಗಳಿಕೆಗೆ ಅವಸರ ಮಾಡಲಿಲ್ಲ. ಆದರೆ ಇನ್ನೊಂದು ಬದಿಯಲ್ಲಿ ಅವರಿಗೆ ಹೆಚ್ಚು ಬೆಂಬಲ ಸಿಗಲಿಲ್ಲ. 

ADVERTISEMENT

ಅದರಲ್ಲೂ ಊಟದ ವಿರಾಮದ ಹೊತ್ತಿಗೆ ಕೇವಲ ಎರಡು ವಿಕೆಟ್‌ ಪತನವಾಗಿದ್ದವು. ಆ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ಮುಷೀರ್ ಅವರಿಗೆ ಅಣ್ಣ ಸರ್ಫರಾಜ್ ಖಾನ್ ಜೊತೆಯಾಗಿದ್ದರು. ಕ್ರೀಡಾಂಗಣದ ಒಂದು ಗ್ಯಾಲರಿಯಲ್ಲಿ ಸೇರಿದ್ದ ಪ್ರೇಕ್ಷಕರು ಅಣ್ಣ–ತಮ್ಮನ ದೊಡ್ಡ ಜೊತೆಯಾಟ ನೋಡುವ ನಿರೀಕ್ಷೆಯಲ್ಲಿದ್ದರು. ಆದರೆ ಅದು ಈಡೇರಲಿಲ್ಲ. 

ವಿರಾಮದ ನಂತರ ಆವೇಶ್ ಖಾನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಸರ್ಫರಾಜ್ ಬಿದ್ದರು. ನಂತರ ನಾಲ್ವರು ಬ್ಯಾಟರ್‌ಗಳು ಅವರನ್ನು ಹಿಂಬಾಲಿಸಿದರು. ಇದರಿಂದಾಗಿ ತಂಡವು ಮೂರಂಕಿ ಮೊತ್ತ ಮುಟ್ಟುವುದೇ ಅನುಮಾನವಾಗಿ ಕಂಡಿತು. 

ಆದರೆ ಛಲ ಬಿಡದೇ ಗಟ್ಟಿಯಾಗಿ ನಿಂತ ಮುಷೀರ್ ದಿಟ್ಟ ಆಟವಾಡಿದರು. ಅವರಿಗೆ ನವದೀಪ್ ಸೈನಿ ತಕ್ಕ ಜೊತೆ ನೀಡಿದರು. ದಿನದಾಟದ ಅಂತ್ಯಕ್ಕೆ ಮುರಿಯದ ಎಂಟನೇ ವಿಕೆಟ್ ಜೊತೆಯಾಟದಲ್ಲಿ 108 ರನ್‌ ಸೇರಿಸಿದರು.

‘ಸೈನಿ ಕ್ರೀಸ್‌ಗೆ ಬಂದ ಕೂಡಲೆ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ತಾವು ವಿಕೆಟ್‌ ಪತನವಾಗದಂತೆ ನೋಡಿಕೊಂಡು ಬೆಂಬಲ ನೀಡುವುದಾಗಿ ಹೇಳಿದರು. ಯಾವುದೇ ರೀತಿಯ ಅವಸರ, ಆತಂಕ ಬೇಡ ಎಂದು ಬೆನ್ನುತಟ್ಟಿದರು. ನನಗಿಂತ ಹೆಚ್ಚು ಅನುಭವಿಯಾಗಿರುವ ಸೈನಿ ತಾವು ಹೇಳಿದಂತೆಯೇ ನಡೆದುಕೊಂಡರು. ಅದರಿಂದಾಗಿ ಉಪಯುಕ್ತ ಜೊತೆಯಾಟವಾಡಲು ಸಾಧ್ಯವಾಯಿತು’ ಎಂದು ಮುಷೀರ್, ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಷೀರ್ 118 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಚಹಾ ವಿರಾಮದ ನಂತರ ಕ್ರೀಸ್‌ಗೆ ಮರಳಿದ ನಂತರ ಅವರ ಆಟಕ್ಕೆ ವೇಗ ಸೇರಿಕೊಂಡಿತು. ಈ ಅವಧಿಯಲ್ಲಿ ತಾವು ಎದುರಿಸಿದ ಖಾನ್ 87 ಎಸೆತಗಳಲ್ಲಿ 50 ರನ್ ಸೂರೆ ಮಾಡಿದರು.

ದುಲೀಪ್ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶತಕ ದಾಖಲಿಸಿದರು. ಡ್ರೆಸಿಂಗ್ ಕೋಣೆಯಲ್ಲಿದ್ದ ಸರ್ಫರಾಜ್ ಕುಣಿದು ಕುಪ್ಫಳಿಸಿದರು. ಚಪ್ಪಾಳೆ ತಟ್ಟಿ ತಮ್ಮನನ್ನು ಅಭಿನಂದಿಸಿದರು.

ಇತ್ತ ಮೈದಾನದಲ್ಲಿ ಆಗಸದತ್ತ ಬ್ಯಾಟ್ ಬೀಸಿ ಮೇಲಕ್ಕೆ ಜಿಗಿದು ಸಂಭ್ರಮಿಸಿದ ಮುಷೀರ್ ತಮ್ಮ ಅಣ್ಣನ ಅಭಿನಂದನೆ ಸ್ವೀಕರಿಸಿದರು.

ಹೋದ ವರ್ಷ ಮುಷೀರ್ ಅವರು ರಣಜಿ ಟೂರ್ನಿಯಲ್ಲಿ ಮುಂಬೈ ಪರವಾಗಿ ಆಡಿದ್ದರು. 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿ ಬಂದ ನಂತರ ಅವರು ರಣಜಿಗೆ ಪದಾರ್ಪಣೆ ಮಾಡಿದ್ದರು. ಆರು ಪಂದ್ಯಗಳಲ್ಲಿ 529 ರನ್ ಗಳಿಸಿದ್ದರು. ಅದರಲ್ಲಿ ಒಂದು ದ್ವಿಶತಕ, ಶತಕ ಮತ್ತು ಅರ್ಧಶತಕಗಳಿದ್ದವು.

ಸಂಕ್ಷಿಪ್ತ ಸ್ಕೋರು: ಭಾರತ ಬಿ: 79 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 202 (ಯಶಸ್ವಿ ಜೈಸ್ವಾಲ್ 30, ಅಭಿಮನ್ಯು ಈಶ್ವರನ್ 13, ಮುಷೀರ್ ಖಾನ್ ಔಟಾಗದೆ 105, ನವದೀಪ್ ಸೈನಿ ಔಟಾಗದೆ 29, ಖಲೀಲ್ ಅಹಮದ್ 39ಕ್ಕೆ2, ಆಕಾಶದೀಪ್ 28ಕ್ಕೆ2, ಆವೇಶ್ ಖಾನ್ 42ಕ್ಕೆ2) ವಿರುದ್ಧ– ಭಾರತ ಎ ತಂಡ

ಭಾರತ ಬಿ ತಂಡದ ಮುಷೀರ್ ಖಾನ್ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಸಂಭ್ರಮಿಸಿದರು   –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.