ಮ್ಯಾಕೆ (ಆಸ್ಟ್ರೇಲಿಯಾ): ವೇಗದ ಬೌಲರ್ ಬ್ರೆಂಡನ್ ಡೊಗೆಟ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಕುಸಿದ ಭಾರತ ‘ಎ’ ತಂಡವು ಗುರುವಾರ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಕೇವಲ 107 ರನ್‌ಗಳಿಗೆ ಕುಸಿಯಿತು.
ದಿನದಾಟದ ಕೊನೆಗೆ ಆತಿಥೇಯ ತಂಡ 4 ವಿಕೆಟ್‌ಗೆ 99 ರನ್ ಗಳಿಸಿತು. ಮುಕೇಶ್ ಕುಮಾರ್ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.
ಡೊಗೆಟ್ ಅವರು 11 ಓವರುಗಳ ದಾಳಿಯಲ್ಲಿ ಕೇವಲ 15 ರನ್ನಿತ್ತು 6 ವಿಕೆಟ್ ಪಡೆದು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು. ಚೆಂಡಿಗೆ ಪುಟಿತ ನೀಡುತ್ತಿದ್ದ ಪಿಚ್‌ನಲ್ಲಿ ಅವರನ್ನು ಎದುರಿಸಲು ಭಾರತದ ಆಟಗಾರರು ಪರದಾಡಿದರು. ಕೇವಲ ಮೂವರು ಎರಡಂಕಿ ಮೊತ್ತ ಗಳಿಸಿದರು.
ಆರಂಭ ಆಟಗಾರರಾದ ಅಭಿಮನ್ಯ ಈಶ್ವರನ್ (7, 30ಎ) ಮತ್ತು ಋತುರಾಜ್ ಗಾಯಕವಾಡ (0) ಅವರು ವೇಗದ ಬೌಲರ್ ಜೋರ್ಡನ್ ಬಕ್ಕಿಂಗಮ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತರು. ಅದರಲ್ಲೂ ಗಾಯಕವಾಡ ಅವರ ಕ್ಯಾಚನ್ನು ಕೀಪರ್ ಜೋಶ್ ಫಿಲಿಪ್ ಅವರು ಎಡಕ್ಕೆ ಜಿಗಿದು ಡೈವ್ ಮಾಡಿ ಹಿಡಿದ ರೀತಿ ಅಮೋಘವಾಗಿತ್ತು. ಅವರು ಒಟ್ಟು ಐದು ಕ್ಯಾಚ್‌ಗಳನ್ನು ಹಿಡಿದರು.
ಜೋರ್ಡನ್ ಆರಂಭದಲ್ಲಿ ಹೊಡೆತ ನೀಡಿದ ನಂತರ ಡೊಜೆಟ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಈಶ್ವರನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಮೇಲೆ ಹೆಚ್ಚಿನ ಗಮನ ಇಡಲಾಗಿತ್ತು. ಇವರಿಬ್ಬರು ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಸರಣಿ 22 ರಂದು ಪರ್ತನ್‌ನಲ್ಲಿ ಆರಂಭವಾಗಲಿದೆ. ಈಶ್ವರನ್ ಅವರು ಚೆಂಡಿಗೆ ಬೌನ್ಸ್ ನೀಡುವ ಪಿಚ್‌ನಲ್ಲಿ ಆಡಲು ಪರದಾಡುತ್ತಾರೆಂಬ ಮಾತು ನಿಜವಾಯಿತು. ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಸರಾಗವಾಗಿ ಆಡಲಾಗಲಿಲ್ಲ.
ಸಾಯಿ ಸುದರ್ಶನ್ (21) ಮತ್ತು ದೇವದತ್ತ ಪಡಿಕ್ಕಲ್ (36, 77ಎ, 4x2) ಸ್ವಲ್ಪ ಭರವಸೆ ಮೂಡಿಸಿದರೂ, ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಇವರಿಬ್ಬರನ್ನು ಬಿಟ್ಟರೆ ನವದೀಪ್ ಸೈನಿ (23) ಮಾತ್ರ ಡಬಲ್ ಡಿಜಿಟ್ ಮೊತ್ತ ಗಳಿಸಿದರು.
ಸ್ಕೋರುಗಳು: ಮೊದಲ ಇನಿಂಗ್ಸ್: ಭಾರತ ಎ: 47.4 ಓವರುಗಳಲ್ಲಿ 107 (ಸಾಯಿ ಸುದರ್ಶನ್ 21, ದೇವದತ್ತ ಪಡಿಕ್ಕಲ್ 36, ನವದೀಪ್ ಸೈನಿ 23; ಜೋರ್ಡನ್ ಬಕ್ಕಿಂಗಮ್ 18ಕ್ಕೆ2, ಬ್ರೆಂಡನ್ ಡೊಗೆಟ್ 15ಕ್ಕೆ6); ಆಸ್ಟ್ರೇಲಿಯಾ ಎ: 39 ಓವರುಗಳಲ್ಲಿ 4 ವಿಕೆಟ್‌ಗೆ 99 (ನಥಾನ್ ಮ್ಯಾಕ್‌ಸ್ವೀನಿ ಔಟಾಗದೇ 29, ಬ್ಯು ವೆಬ್‌ಸ್ಟರ್ 33; ಮುಕೇಶ್ ಕುಮಾರ್ 30ಕ್ಕೆ2, ಪ್ರಸಿದ್ಧ ಕೃಷ್ಣ 18ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.