ನಾಗಪುರ: ಆಸ್ಟ್ರೇಲಿಯಾ ಎದುರಿನ ಎರಡನೇ ಟಿ20 ಪಂದ್ಯದ ಕೊನೆಯಲ್ಲಿ ಒಂದು ಸಿಕ್ಸ್ ಮತ್ತು ಬೌಂಡರಿ ಬಾರಿಸುವ ಮೂಲಕ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮತ್ತೆ ಫಿನಿಷರ್ ಆಗಿ ಕಂಗೊಳಿಸಿದ್ದರು.
ವಿಸಿಎ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಇನಿಂಗ್ಸ್‌ಗೆ 8 ಓವರ್‌ಗಳನ್ನು ನಿಗದಿಪಡಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 90 ರನ್ ಗಳಿಸಿದ್ದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿ ಗೆದ್ದಿತ್ತು. ಮೂರು ಪಂದ್ಯಗಳ ಸರಣಿಯನ್ನು 1–1 ರಲ್ಲಿ ಸಮಬಲ ಮಾಡಿಕೊಂಡಿತ್ತು.
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಪಂದ್ಯದ ಬಳಿಕ ದಿನೇಶ್ ಕಾರ್ತಿಕ್ ಅವರನ್ನು ಮಾತಿಗೆಳೆದಿದ್ದರು. ತಮ್ಮ ಎಂದಿನ ಶೈಲಿಯಲ್ಲಿ, ‘ಭಾರತ ಸರಣಿ ಸಮಬಲ ಮಾಡಿಕೊಂಡಿದೆ. ಫಿನಿಷರ್ ನಮ್ಮ ಜತೆಗಿದ್ದಾರೆ. ಈಸಿ ಗೇಮ್ ಡಿ.ಕೆ? ಪೀಸ್ ಆಫ್ ಕೇಕ್, 6, 4. ಧನ್ಯವಾದಗಳು’ ಎಂದು ಹೇಳಿದ್ದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಕಾರ್ತಿಕ್, ‘ಇಟ್ ಈಸ್ ನೆವೆರ್ ಆ್ಯನ್ ಈಸಿ ಗೇಮ್ ಅಂತ ಹೇಳಲು ನನಗೆ ಕಲಿಸಿದ್ದೇ ನೀವು ರವಿ ಭಾಯ್! ದಯವಿಟ್ಟು ಹಾಗೆ ಹೇಳಬೇಡಿ. ಇದು ಕಠಿಣ ಪಂದ್ಯವಾಗಿತ್ತು. ಅದು ಹೇಗೆ ಎಂಬುದು ನಿಮಗೇ ಗೊತ್ತಿದೆ’ ಎಂದು ಹೇಳಿದ್ದರು.
ರವಿ ಶಾಸ್ತ್ರಿ ಹಾಗೂ ದಿನೇಶ್ ಕಾರ್ತಿಕ್ ನಡುವಣ ಸಂಭಾಷಣೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ಪ್ರಿಯರಿಂದ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಗುರಿ ಬೆನ್ನತ್ತಿದ ಭಾರತ ತಂಡದ ಪರ ನಾಯಕ ರೋಹಿತ್ ಶರ್ಮಾ ಸಹ ಉತ್ತಮ ಆಟವಾಡಿದ್ದರು. ಅವರುಔಟಾಗದೆ 46 ರನ್ (20 ಎ., 4X4, 6X4) ಗಳಿಸಿದ್ದರು.ಭಾರತದ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 22 ರನ್‌ಗಳು ಬೇಕಿದ್ದವು. ಪ್ಯಾಟ್ ಕಮಿನ್ಸ್ ಬೌಲ್ ಮಾಡಿದ ಏಳನೇ ಓವರ್‌ನಲ್ಲಿ 13 ರನ್‌ಗಳು ಬಂದವು. ಕೊನೆಯ ಓವರ್‌ನಲ್ಲಿ 9 ರನ್‌ಗಳ ಅವಶ್ಯಕತೆಯಿತ್ತು. ಡೇನಿಯಲ್ ಸ್ಯಾಮ್ಸ್ ಬೌಲ್ ಮಾಡಿದ ಓವರ್‌ನ ಮೊದಲ ಎರಡು ಎಸೆತಗಳನ್ನು ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿಗೆ ಅಟ್ಟಿದ ದಿನೇಶ್ ಕಾರ್ತಿಕ್, ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.