ADVERTISEMENT

ದೇಶದಲ್ಲಿ ವ್ಯವಸ್ಥಿತ ಜನಾಂಗೀಯ ಭೇದ, ಬದಲಾವಣೆಗೆ ಬದ್ಧ: ಇಸಿಬಿ

ಬದಲಾವಣೆಗೆ ಬದ್ಧ: ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ

ಪಿಟಿಐ
Published 13 ಜೂನ್ 2020, 9:13 IST
Last Updated 13 ಜೂನ್ 2020, 9:13 IST
ಇಸಿಬಿ ಲೋಗೊ
ಇಸಿಬಿ ಲೋಗೊ   

ಲಂಡನ್‌: ‘ದೇಶದಾದ್ಯಂತ ವ್ಯವಸ್ಥಿತ ವರ್ಣಬೇಧ ನೀತಿ ಅಸ್ತಿತ್ವದಲ್ಲಿದೆ. ಕ್ರಿಕೆಟ್‌ ಕೂಡ ಈ ಪಿಡುಗಿದಿಂದ ಮುಕ್ತವಾಗಿಲ್ಲ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಒಪ್ಪಿಕೊಂಡಿದೆ. ಈ ಹಂತದಲ್ಲಿ ಅರ್ಥಪೂರ್ಣ ಮತ್ತು ದೀರ್ಘಾವಧಿ ಬದಲಾವಣೆಗಳನ್ನು ತರಲು ಬದ್ಧವಿರುವುದಾಗಿ ಮಂಡಳಿ ಹೇಳಿದೆ.

ಅಮೆರಿಕದಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಆಫ್ರೊ–ಅಮೆರಿಕನ್‌ ಜಾರ್ಜ್ ಫ್ಲಾಯ್ಡ್‌ ಬಲಿಯಾದ ನಂತರ ಜನಾಂಗೀಯ ಅಸಮಾನತೆ ವಿರೋಧಿಸಿ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಿಂದ ತಾನು ಪಾಠ ಕಲಿಯಬೇಕಾಗಿದೆ ಎಂದು ಇಸಿಬಿ ಶುಕ್ರವಾರ ಹೇಳಿಕೆಯಲ್ಲಿ ಹೇಳಿದೆ.

‘ಕಪ್ಪು ಜನಾಂಗದವರಾಗಿ ಕ್ರಿಕೆಟ್‌, ಕ್ರೀಡೆ ಹಾಗೂ ಸಮಾಜದಲ್ಲಿ ಅನುಭವಿಸುತ್ತಿರುವ ಯಾತನೆಯ ಬಗ್ಗೆ ಇತ್ತೀಚೆಗೆ ಕೆಲವರು ಧ್ವನಿಯೆತ್ತಿದ್ದಾರೆ. ಅವರ ನೋವನ್ನು ಆಲಿಸುತ್ತಿದ್ದೇವೆ. ಇಂಥ ಪ್ರಮುಖ ವಿಷಯದ ಬಗ್ಗೆ ಅವರು ಧ್ವನಿಯೆತ್ತಿರುವುದು ಸ್ವಾಗತಾರ್ಹ’ ಎಂದು ಇಸಿಬಿ ಹೇಳಿದೆ.

ADVERTISEMENT

‘ದೇಶದಾದ್ಯಂತ ಇರುವ ವಿವಿಧ ಸಂಸ್ಥೆಗಳು ಹಾಗೂ ವಲಯಗಳಲ್ಲಿ ವ್ಯವಸ್ಥಿತ ಜನಾಂಗೀಯ ತಾರತಮ್ಯ ಆವರಿಸಿದೆ. ಕ್ರೀಡೆ ಕೂಡ ಇದರಿಂದ ಹೊರತಾಗಿಲ್ಲ’ ಎಂದು ಇಸಿಬಿ ತಿಳಿಸಿದೆ.

ವರ್ಣಭೇದ ನೀತಿಯ ವಿರುದ್ಧ ವಿಶ್ವಾದ್ಯಂತ ನಡೆಯುತ್ತಿರುವ ಆಂದೋಲನವನ್ನು ಕ್ರೀಡಾ ಕ್ಷೇತ್ರದ ಪ್ರಮುಖರೂ ಬೆಂಬಲಿಸಿದ್ದಾರೆ. ಇಂಗ್ಲೆಂಡ್‌ ವೇಗಿಗಳಾದ ಜೋಫ್ರಾ ಆರ್ಚರ್‌ ಹಾಗೂ ಜೇಮ್ಸ್‌ ಆ್ಯಂಡರ್ಸನ್‌, ವೆಸ್ಟ್‌ ಇಂಡೀಸ್‌ನ ಡ್ಯಾರೆನ್‌ ಸಾಮಿ, ಕ್ರಿಸ್‌ ಗೇಲ್‌ ಪ್ರತಿಕ್ರಿಯೆ ನೀಡಿದ್ದು, ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನ ಬೆಂಬಲಿಸಿದ್ದಾರೆ.

‘ಕ್ರಿಕೆಟ್‌ ಪ್ರತಿಯೊಬ್ಬರಿಗಾಗಿ ಇರುವ ಆಟ. ಆದರೆ ದುರದೃಷ್ಟವಶಾತ್‌, ಕೆಲವು ಸಮುದಾಯಗಳಲ್ಲಿಈ ಆಟವನ್ನು ಆಸ್ವಾದಿಸಲು ಅಡೆತಡೆಗಳಿವೆ ಎಂಬುದು ವಿಷಾದನೀಯ. ಈ ಅಡೆತಡೆಗಳನ್ನು ನಿವಾರಿಸಿ ಬದಲಾವಣೆ ತರುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಇಸಿಬಿ ವಿವರಿಸಿದೆ.

‘ಕಪ್ಪು ಸಮುದಾಯದ ಮುಖಂಡರು ಹಾಗೂ ಪ್ರಭಾವಿಗಳನ್ನು ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರಿಂದ ಸದ್ಯ ಅಸ್ತಿತ್ವದಲ್ಲಿರುವ ನಿಯಮಗಳು ಹಾಗೂ ಕಾರ್ಯಕ್ರಮಗಳ ಕುರಿತು ಮರು ಪರಿಶೀಲನೆ ಹಾಗೂ ಆತ್ಮಾವಲೋಕನ ಸಾಧ್ಯವಾಗಲಿದೆ. ಕಪ್ಪು ಜನಾಂಗದವರು ಎತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.