ಕೋಲ್ಕತ್ತ: ಭಾರತದ ‘ಕ್ರಿಕೆಟ್ ಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣವು ಈಗ ಕ್ವಾರಂಟೈನ್ ಕೇಂದ್ರವಾಗಿ ಬದಲಾಗಲಿದೆ.
ಪಶ್ಚಿಮ ಬಂಗಾಳದಲ್ಲಿ ಸುಮಾರು550 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ ಇಬ್ಬರು ನಿಧನರಾಗಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳೆಲ್ಲಾ ರೋಗಿಗಳಿಂದ ಭರ್ತಿಯಾಗಿವೆ. ಹೀಗಾಗಿ 80,000 ಆಸನ ಸಾಮರ್ಥ್ಯವಿರುವ ಈಡನ್ ಮೈದಾನದಲ್ಲಿ ಪೊಲೀಸರಿಗಾಗಿ ಆರೈಕೆ ಕೇಂದ್ರ ನಿರ್ಮಿಸಲು ಪಶ್ಚಿಮ ಬಂಗಾಳ ಸರ್ಕಾರವು ನಿರ್ಧರಿಸಿದೆ.
‘ಇದು ಸಂದಿಗ್ಧತೆಯ ಸಮಯ. ಈಗ ನಾವು ಸರ್ಕಾರದ ಬೆನ್ನಿಗೆ ನಿಲ್ಲುವುದು ತುಂಬಾ ಅಗತ್ಯ. ಅದು ನಮ್ಮ ಕರ್ತವ್ಯ ಕೂಡ. ಪೊಲೀಸರು ‘ಕೋವಿಡ್ ಸೇನಾನಿ’ಗಳಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಈಗ ಅವರೂ ಕಷ್ಟದಲ್ಲಿದ್ದಾರೆ. ಹೀಗಾಗಿ ಮೈದಾನವನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲು ಅನುಮತಿ ಕೊಟ್ಟಿದ್ದೇವೆ. ಮೈದಾನದ ಗ್ಯಾಲರಿಗಳಲ್ಲಿ ಮಾತ್ರ ಹಾಸಿಗೆಗಳನ್ನು ಹಾಕಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ ಅವರು ಶನಿವಾರ ತಿಳಿಸಿದ್ದಾರೆ.
ಹೋದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವಣ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆಈಡನ್ ಅಂಗಳವು ವೇದಿಕೆ ಕಲ್ಪಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಇದು ತವರಿನ ಅಂಗಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.