ನವದೆಹಲಿ: ಹಠಾತ್ ನಿಧನದಿಂದ ಕ್ರಿಕೆಟ್ ಪ್ರಿಯರನ್ನು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದ ಸ್ಪಿನ್ ದಿಗ್ಗಜ,ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರಿಗೆ ಶನಿವಾರ ಕ್ರೀಡಾಲೋಕ ಶ್ರದ್ಧಾಂಜಲಿ ಸಲ್ಲಿಸಿತು. ಹೃದಯಾಘಾತದಿಂದಾಗಿ ಥಾಯ್ಲೆಂಡಿನಲ್ಲಿ ಶುಕ್ರವಾರ ರಾತ್ರಿ ವಾರ್ನ್ ನಿಧನರಾಗಿದ್ದರು.
ಶನಿವಾರ ನಡೆದ ಮಹಿಳೆಯರ ವಿಶ್ವಕಪ್ ಟೂರ್ನಿ ಸೇರಿದಂತೆ ವಿವಿಧ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ವಾರ್ನ್ ನೆನಪಿನಲ್ಲಿ ಒಂದು ನಿಮಿಷ ಮೌನ ಆಚರಣೆ ನಡೆಸಲಾಯಿತು. ಎಲ್ಲ ತಂಡಗಳು ಕ್ರಿಕೆಟಿಗರು ಕೈಗೆ ಕಪ್ಪು ಪಟ್ಟಿ ಧರಿಸಿ ಆಡಿ ಗೌರವ ಸಲ್ಲಿಸಿದರು.
ಮಹಿಳೆಯರ ವಿಶ್ವಕಪ್ ಟೂರ್ನಿಯ ಎರಡೂ ಪಂದ್ಯಗಳಲ್ಲಿಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ ದಕ್ಷಿಣ ಆಫ್ರಿಕಾ ತಂಡಗಳ ಆಟಗಾರ್ತಿಯರು ಕಪ್ಪು ಪಟ್ಟಿ ಧರಿಸಿದ್ದರು. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ–ಪಾಕಿಸ್ತಾನ ಆಟಗಾರರು, ಮೊಹಾಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ–ಶ್ರೀಲಂಕಾ, ಢಾಕಾದಲ್ಲಿ ನಡೆದ ಟ್ವೆಂಟಿ20 ಪಂದ್ಯಕ್ಕೂ ಮೊದಲು ಬಾಂಗ್ಲಾದೇಶ–ಅಫ್ಗಾನಿಸ್ತಾನ ಆಟಗಾರರು ಕೂಡ ಗೌರವ ಸೂಚಿಸಿದರು.
ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡವರು ಮತ್ತು ವಿವಿಧ ದೇಶಗಳ ಆಡಳಿತಗಾರರು ಕೂಡ ಕೂಡ ಶೇನ್ ವಾರ್ನ್ ಅವರನ್ನು ನೆನೆದರು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಂದ ಹಾಲಿವುಡ್ ನಟರಾದ ರಸೆಲ್ ಕ್ರೋವ್ ಮತ್ತು ಹ್ಯೂಗ್ ಜಾಕ್‌ಮಾನ್ ವರೆಗೆ ವಿವಿಧ ಕ್ಷೇತ್ರಗಳ ಪ್ರಮುಖರಿಂದಲೂ ಶೋಕ ವ್ಯಕ್ತವಾಗಿದೆ.
ಶೇನ್ ವಾರ್ನ್ ಅವರೊಂದಿಗೆ ಆಸ್ಟ್ರೇಲಿಯಾದ ಆಟಗಾರರು, ವಾರ್ನ್ ವಿರುದ್ಧ ಆಡಿದ ವಿವಿಧ ದೇಶಗಳ ಕ್ರಿಕೆಟಿಗರು, ಲೀಗ್‌ಗಳಲ್ಲಿ ಆಡಿದ ಪ್ರಮುಖರು ಕೂಡ ಅವರ ಗುಣಗಾನ ಮಾಡಿದ್ದಾರೆ.
’ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. 15 ವರ್ಷದವನಿದ್ದಾಗ ಅವರನ್ನು ಮೊದಲು ಭೇಟಿಯಾಗಿದ್ದೆ. ನಂತರ ಒಂದು ದಶಕಕ್ಕೂ ಹೆಚ್ಚು ಕಾಲ ಜೊತೆಯಾಗಿ ಆಡಿದ್ದೇವೆ. ತಂಡದ ಏಳು–ಬೀಳುಗಳಲ್ಲಿ ಭಾಗಿಯಾಗಿದ್ದೆವು’ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಮಾಜಿ ಕ್ರಿಕೆಟಿಗರಾದ ಗ್ಲೆನ್ ಮೆಗ್ರಾ, ಬ್ರಯಾನ್ ಲಾರಾ, ವಿವಿಯನ್ ರಿಚರ್ಡ್ಸ್, ಮೈಕೆಲ್ ವಾನ್, ಇಯಾನ್ ಬಾಥಮ್, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ನಟಿ ಮತ್ತು ಐಪಿಎಲ್ ತಂಡದ ಮಾಲಕಿ ಪ್ರೀತಿ ಜಿಂಟಾ ಮುಂತಾಗಿ ನೂರಾರು ಪ್ರಮುಖರು ಸಾಮಾಜಿಕ ತಾಣಗಳಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ವಿವಿಧ ದೇಶಗಳ ಕ್ರಿಕೆಟ್ ಮಂಡಗಳಿಗಳು ಕೂಡ ಸಂತಾಪ ವ್ಯಕ್ತಪಡಿಸಿವೆ.
ರಾಷ್ಟ್ರೀಯ ಗೌರವ; ಎಂಸಿಜಿ ಸ್ಟ್ಯಾಂಡ್‌ಗೆ ಹೆಸರು
ಮೆಲ್ಬರ್ನ್: ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಶನಿವಾರ ಘೋಷಿಸಿದ್ದಾರೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದ ಸ್ಟ್ಯಾಂಡ್ ಒಂದಕ್ಕೆ ವಾರ್ನ್ ಅವರ ಹೆಸರನ್ನು ಇಡಲಾಗುವುದು ಎಂದು ಕೂಡ ಅವರ ತಿಳಿಸಿದ್ದಾರೆ.
ವಾರ್ನ್ ಅವರ ಹಠಾತ್ ನಿಧನದ ಸುದ್ದಿ ದೇಶದ ಜನರಿಗೆ ಬರಸಿಡಿಲಿನಂತೆ ಬಡಿದಿದೆ. ಫೆಡರಲ್ ಮತ್ತು ವಿಕ್ಟೋರಿಯನ್ ಸರ್ಕಾರವು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ವಾರ್ನ್ ಅವರ ಕುಟುಂಬದ ಜೊತೆಗೂಡಿ ಅಂತ್ಯಸಂಸ್ಕಾರ ನೆರವೇರಿಸಲಿದೆ ಎಂದು ಮಾರಿಸನ್ ವಿವರಿಸಿದ್ದಾರೆ.
ತಂಡದ ಚೇತನ ಶೇನ್ ವಾರ್ನ್
ನವದೆಹಲಿ: ’ನಮ್ಮ ತಂಡದ ಚೇತನವಾಗಿದ್ದ ಶೇನ್ ವಾರ್ನ್ ಅನೇಕ ಆಟಗಾರರ ವೃತ್ತಿಜೀವನಕ್ಕೆ ದಾರಿದೀಪವಾಗಿದ್ದರು’ ಎಂದು ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ್ ರಾಯಲ್ಸ್ ಆಡಳಿತ ಶನಿವಾರ ಅಭಿಪ್ರಾಯಪಟ್ಟಿದೆ.
2008ರಿಂದ 2011ರ ವರೆಗೆ ರಾಯಲ್ಸ್ ತಂಡದಲ್ಲಿ ಒಟ್ಟು 55 ಪಂದ್ಯಗಳನ್ನು ಶೇನ್ ವಾರ್ನ್ ಆಡಿದ್ದಾರೆ. ಮೊದಲ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅವರು ಲೀಗ್‌ನ ಪ್ರಶಸ್ತಿ ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.