ಹ್ಯಾಮಿಲ್ಟನ್: ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್, ನಾಯಕ ಜೋ ರೂಟ್ (226; 441 ಎಸೆತ, 22 ಬೌಂಡರಿ, 1 ಸಿಕ್ಸರ್) ದ್ವಿಶತಕದ ಆಟವಾಡಿ ನ್ಯೂಜಿಲೆಂಡ್ ಬೌಲರ್‌ಗಳನ್ನು ಕಾಡಿದರು. ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ನೀಲ್ ವ್ಯಾಂಗರ್ (35.5–3–124–5) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನಡುವೆಯೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ದಿಟ್ಟ ಆಟವಾಡಿ 476 ರನ್ ಸೇರಿಸಿದರು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 101 ರನ್‌ಗಳ ಮುನ್ನಡೆ ಸಾಧಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ನಾಲ್ಕನೇ ದಿನವಾದ ಸೋಮವಾರದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದ್ದು 5 ರನ್‌ಗಳ ಹಿನ್ನಡೆಯಲ್ಲಿದೆ.
ಕಳೆದ 10 ಇನಿಂಗ್ಸ್‌ಗಳ ಪೈಕಿ ಆರರಲ್ಲಿ ವೈಫಲ್ಯ ಕಂಡಿರುವ ಆರಂಭಿಕ ಆಟಗಾರ ಜೀತ್ ರಾವಲ್, ನ್ಯೂಜಿಲೆಂಡ್‌ನ ಎರಡನೇ ಇನಿಂಗ್ಸ್‌ನಲ್ಲೂ ನಿರಾಸೆಗೆ ಒಳಗಾದರು. ಸ್ಯಾಮ್ ಕರನ್‌ಗೆ ವಿಕೆಟ್ ಒಪ್ಪಿಸಿದ ಅವರಿಗೆ ಖಾತೆ ತೆರೆಯಲು ಆಗಲಿಲ್ಲ. ಅವರ ಜೋಡಿ, ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಟಾಮ್ ಲಥಾಮ್ ತಂಡದ ಮೊತ್ತ 28 ರನ್‌ಗಳಾಗಿದ್ದಾಗ ವಾಪಸಾದರು. ನಂತರ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ 68 ರನ್ ಜೊತೆಯಾಟದ ಮೂಲಕ ತಂಡದ ಪತನವನ್ನು ತಡೆದರು.
’ರೂಟ್’ ಬದಲಿಸಿದ ನಾಯಕ: ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 24 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಜೋ ರೂಟ್ ಆರಂಭಿಕ ಆಟಗಾರ ರೋರಿ ಬರ್ನ್ಸ್ ಜೊತೆಗೂಡಿ 177 ರನ್ ಸೇರಿಸಿದರು. ಒಲಿ ಪೊಪೆ ಜೊತೆಗೆ 6ನೇ ವಿಕೆಟ್‌ಗೆ 193 ರನ್ ಸೇರಿಸಿದರು. 11 ತಾಸುಗಳ ಮ್ಯಾರಥಾನ್ ಇನಿಂಗ್ಸ್ ಕಟ್ಟಿದ ರೂಟ್ ವೈಯಕ್ತಿಕ 3ನೇ ದ್ವಿಶತಕ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್, ನ್ಯೂಜಿಲೆಂಡ್: 375; ಇಂಗ್ಲೆಂಡ್ (ಭಾನುವಾರದ ಅಂತ್ಯಕ್ಕೆ 5ಕ್ಕೆ269): 162.5 ಓವರ್‌ಗಳಲ್ಲಿ 476 (ರೋರಿ ಬರ್ನ್ಸ್ 101, ಜೋ ರೂಟ್ 226, ಒಲಿ ಪೊಪೆ 75; ಟಿಮ್ ಸೌಥಿ 90ಕ್ಕೆ2, ಮ್ಯಾಟ್ ಹೆನ್ರಿ 87ಕ್ಕೆ1, ನೀಲ್ ವ್ಯಾಂಗರ್ 124ಕ್ಕೆ5, ಮಿಷೆಲ್ ಸ್ಯಾಂಟನರ್ 88ಕ್ಕೆ1); ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 34 ಓವರ್‌ಗಳಲ್ಲಿ 2ಕ್ಕೆ 96 (ಟಾಮ್ ಲಥಾಮ್ 18, ಕೇನ್ ವಿಲಿಯಮ್ಸನ್ ಬ್ಯಾಟಿಂಗ್ 37, ರಾಸ್ ಟೇಲರ್ ಬ್ಯಾಟಿಂಗ್ 31; ಸ್ಯಾಮ್ ಕರನ್ 26ಕ್ಕೆ1, ಕ್ರಿಸ್ ವೋಕ್ಸ್ 8ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.