ADVERTISEMENT

ಇಂಗ್ಲೆಂಡ್ vs ನ್ಯೂಜಿಲೆಂಡ್: ವಿಶ್ವಕಪ್ ಫೈನಲ್ ನೆನಪಿಸಿದ ಮತ್ತೊಂದು ರೋಚಕ ಕ್ಷಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 15:16 IST
Last Updated 6 ಜೂನ್ 2022, 15:16 IST
ಟೆಸ್ಟ್‌ ಪಂದ್ಯದ ವೇಳೆ ಟ್ರೆಂಟ್‌ ಬೌಲ್ಟ್‌ ಹಾಗೂ ಬೆನ್‌ ಸ್ಟೋಕ್ಸ್‌
ಟೆಸ್ಟ್‌ ಪಂದ್ಯದ ವೇಳೆ ಟ್ರೆಂಟ್‌ ಬೌಲ್ಟ್‌ ಹಾಗೂ ಬೆನ್‌ ಸ್ಟೋಕ್ಸ್‌   

2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ಉಭಯ ತಂಡಗಳು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸೆಣಸಾಟ ನಡೆಸುತ್ತಿವೆ.

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ನಡೆದಿದ್ದಂತಹದೇ ಘಟನೆಯೊಂದು, ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿಯೂ ನಡೆದಿರುವುದು ಕ್ರಿಕೆಟ್‌ ಪ್ರಿಯರ ಗಮನ ಸೆಳೆದಿದೆ.

ಇಂಗ್ಲೆಂಡ್‌ಗೆ ಮೊದಲ ವಿಶ್ವಕಪ್‌
2019ರ ಜುಲೈ 14ರಂದು ಇಂಗ್ಲೆಂಡ್‌ನ ಲಾರ್ಡ್‌ನಲ್ಲಿ ನಡೆದಿದ್ದ ಏಕದನ ವಿಶ್ವಕಪ್‌ ಫೈನಲ್‌ ಪಂದ್ಯ ಕ್ರಿಕೆಟ್‌ ಜಗತ್ತನ್ನೇ ತನ್ನತ್ತ ಸೆಳೆದುಕೊಂಡಿತ್ತು. ಉಭಯ ತಂಡಗಳು 50 ಓವರ್‌ಗಳ ಇನಿಂಗ್ಸ್‌ನಲ್ಲಿ ಸಮನಾಗಿ ರನ್‌ ಗಳಿಸಿದ್ದ ಕಾರಣ, ಪಂದ್ಯವು ಸೂಪರ್‌ ಓವರ್‌ಗೆ ಸಾಗಿತ್ತು. ಆದರೆ, ಆಗಲೂ ಪಂದ್ಯ ಡ್ರಾ ಆಗಿತ್ತು. ಹೀಗಾಗಿ ಪಂದ್ಯದಲ್ಲಿ ಹೆಚ್ಚು ಬೌಂಡರಿ ಗಳಿಸಿದ್ದ ಇಂಗ್ಲೆಂಡ್‌ ಅನ್ನು ವಿಜಯಿ ಎಂದು ಘೋಷಿಸಲಾಗಿತ್ತು.

ಅದರಂತೆ ಇಂಗ್ಲೆಂಡ್‌ ತಂಡ ಮೊದಲ ಟ್ರೋಫಿಗೆ ಮುತ್ತಿಕ್ಕಿತ್ತು.

ಟಾಸ್‌ ಗೆದ್ದ ನ್ಯೂಜಿಲೆಂಡ್‌, ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 241 ರನ್‌ ಗಳಿಸಿತ್ತು. ಇಂಗ್ಲೆಂಡ್‌ ಕೂಡ ಇಷ್ಟೇ ರನ್‌ ಗಳಿಸಿ ಆಲೌಟ್‌ ಆಗಿತ್ತು.

ಗುರಿ ಬೆನತ್ತಿದ ಇಂಗ್ಲೆಂಡ್‌, ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಆಡಿದ ಸಾಹಸಮಯ ಇನಿಂಗ್ಸ್‌ ನೆರವಿನಿಂದ 49 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 227 ರನ್‌ ಗಳಿಸಿತ್ತು. ಕೊನೇ ಓವರ್‌ನಲ್ಲಿ ಇಂಗ್ಲೆಂಡ್‌ಗೆ 15 ರನ್‌ ಬೇಕಿತ್ತು.

ತಿರುವು ನೀಡಿದ ಕ್ಷಣ
ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ ಇನಿಂಗ್ಸ್‌ನ 50ನೇ ಓವರ್‌ ಬೌಲಿಂಗ್‌ ಮಾಡಿದ್ದ ಟ್ರೆಂಟ್‌ ಬೌಲ್ಟ್‌, ಮೊದಲೆರಡು ಎಸೆತಗಳಲ್ಲಿ ಒಂದೂ ರನ್‌ ನೀಡಿರಲಿಲ್ಲ. ಆದರೆ, ಮೂರನೇ ಎಸೆತವನ್ನು ಸ್ಟೋಕ್ಸ್‌ ಸಿಕ್ಸರ್‌ಗೆ ಅಟ್ಟಿದರು. ನಾಲ್ಕನೇ ಎಸೆತವನ್ನು ಡೀಪ್‌ಮಿಡ್‌ ವಿಕೆಟ್‌ನತ್ತ ಬಾರಿಸಿ ಎರಡು ರನ್‌ಗಾಗಿ ಓಡಿದರು. ಅಲ್ಲಿದ್ದ ಫೀಲ್ಡರ್‌ಸ್ಟೋಕ್ಸ್‌ ರನೌಟ್‌ಗಾಗಿ ವಿಕೆಟ್‌ ಕೀಪರ್‌ನತ್ತ ಚೆಂಡು ಎಸೆದರು. ಆದರೆ, ಕ್ರೀಸ್‌ ತಲುಪಲು ಡೈವ್‌ ಮಾಡಿದ್ದ ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದ ಚೆಂಡು ಬೌಂಡರಿ ಗೆರೆ ಮುಟ್ಟಿತ್ತು. ಇದು ಪಂದ್ಯಕ್ಕೆ ತಿರುವು ನೀಡಿತ್ತು. ಹೀಗಾಗಿ ಕೊನೇ ಎರಡು ಎಸೆತಗಳಲ್ಲಿ ಇಂಗ್ಲೆಂಡ್‌ ಕೇವಲ 3 ರನ್ ಗಳಿಸಿದರೆ ಸಾಕಾಗಿತ್ತು. ಆದರೆ, ಐದು ಮತ್ತು ಆರನೇ ಎಸೆತಗಳ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಆದಿಲ್‌ ರಶೀದ್‌ ಹಾಗೂಮಾರ್ಕ್‌ ವುಡ್‌ ಎರಡನೇ ರನ್‌ಗಾಗಿ ಓಡುವ ವೇಳೆ ರನೌಟ್‌ ಆಗಿದ್ದರು. ಪಂದ್ಯ ಡ್ರಾ ಆಗಿತ್ತು. ನಂತರ ಸೂಪರ್‌ ಓವರ್‌ ನಡೆದಿತ್ತು.

2019ರ ವಿಶ್ವಕಪ್‌ ಫೈನಲ್‌ನಲ್ಲಿ ಟ್ರೆಂಟ್‌ ಬೌಲ್ಟ್‌

ಮತ್ತೆ ಬ್ಯಾಟ್‌ಗೆ ಬಡಿದ ಚೆಂಡು; ನೆನಪಾಯಿತು ವಿಶ್ವಕಪ್‌ ಫೈನಲ್‌
ಸದ್ಯ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ 5 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಕೇನ್‌ ವಿಲಿಯಮ್ಸನ್‌ ನಾಯಕತ್ವದ ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 141 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ285 ರನ್‌ ಗಳಿಸಿದ್ದ ಕೇನ್‌ ಬಳಗ, ಸ್ಟೋಕ್ಸ್‌ ಪಡೆಗೆ 277 ರನ್‌ ಗುರಿ ನೀಡಿತ್ತು.

ಕೇವಲ 69 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಆಂಗ್ಲರ ಬಳಗಕ್ಕೆ, ಜೋ ರೂಟ್‌ (ಅಜೇಯ115) ಮತ್ತು ನಾಯಕ ಸ್ಟೋಕ್ಸ್‌ ಆಸರೆಯಾಗಿದ್ದರು.

42 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್‌ 116 ರನ್‌ ಗಳಿಸಿ ಆಡುತ್ತಿತ್ತು. ಈ ವೇಳೆ ಬೌಲ್ಟ್‌, 43ನೇ ಓವರ್‌ ಬೌಲಿಂಗ್‌ಗೆ ಬಂದರು. ಸ್ಟೈಕ್‌ನಲ್ಲಿದ್ದ ರೂಟ್‌ ಮೊದಲ ಎಸೆತವನ್ನು ಪುಲ್‌ ಮಾಡಿ ಮಿಡ್‌ ವಿಕೆಟ್‌ನತ್ತ ಬಾರಿಸಿದರು. ಅಲ್ಲಿದ್ದ ಫೀಲ್ಡರ್‌ ಚೆಂಡನ್ನು ತಡೆದು, ಸ್ಟೋಕ್ಸ್‌ ರನ್‌ ಔಟ್‌ ಮಾಡಲು ಬೌಲರ್‌ ತುದಿಗೆ ಎಸೆದರು. ಚೆಂಡು ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದು ಪಕ್ಕಕ್ಕೆ ಸರಿಯಿತು. ಸ್ಟೋಕ್ಸ್‌ ಮತ್ತು ರೂಟ್‌ ಆ ಕ್ಷಣವೇ ಕ್ಷಮೆ ಕೋರಿದರು. ಬಳಿಕ ಅಲ್ಲಿದ್ದ ಪ್ರತಿಯೊಬ್ಬರೂ 2019ರ ಫೈನಲ್‌ ಘಟನೆ ನೆನದು ನಕ್ಕರು.

2019ರ ವಿಶ್ವಕಪ್‌ ಫೈನಲ್‌ನಲ್ಲಿ ಬೆನ್‌ ಸ್ಟೋಕ್ಸ್‌

ಎರಡೂ ಪಂದ್ಯಗಳಲ್ಲಿ ಚೆಂಡು ಸ್ಟೋಕ್ಸ್‌ ಬ್ಯಾಟ್‌ಗೆ ಬಡಿದದ್ದು ಹಾಗೂ ಎರಡೂ ಬಾರಿ ಬೌಲ್ಟ್‌ ಅವರೇ ಬೌಲಿಂಗ್ ಮಾಡುತ್ತಿದ್ದದ್ದರು ಎಂಬುದು ಒಂದೆಡೆಯಾದರೇ, ಈ ಪಂದ್ಯಗಳು ನಡೆದದ್ದು ಲಾರ್ಡ್‌ ಕ್ರೀಡಾಂಗಣದಲ್ಲಿಯೇ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ.

ವಿಶ್ವಕಪ್‌ ಫೈನಲ್‌ನಲ್ಲಿ ಅಜೇಯ 84 ರನ್‌ ಗಳಿಸಿ ಮಿಂಚಿದ್ದ ಸ್ಟೋಕ್ಸ್‌, ಇಂದು ಮುಕ್ತಾಯವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿಯೂ ಅರ್ಧಶತಕ (54) ಗಳಿಸಿ ತಮ್ಮ ತಂಡಕ್ಕೆ ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.