ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್, 34ನೇ ಶತಕದ ಸಾಧನೆ ಮಾಡಿದ್ದಾರೆ.
ಆ ಮೂಲಕ ದಿಗ್ಗಜ ಆಲಿಸ್ಟಾರ್ ಕುಕ್ ದಾಖಲೆಯನ್ನು ಮುರಿದಿರುವ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.
ಹಾಗೆಯೇ ದಿಗ್ಗಜರಾದ ಭಾರತದ ಸುನಿಲ್ ಗವಾಸ್ಕರ್, ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ, ಪಾಕಿಸ್ತಾನದ ಯೂನಿಸ್ ಖಾನ್ ಮತ್ತು ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎಂಬ ದಾಖಲೆ ಭಾರತದ ಸಚಿನ್ ತೆಂಡೂಲ್ಕರ್ (51) ಅವರ ಹೆಸರಲ್ಲಿದೆ.
ಇನ್ನು ಅತಿ ಹೆಚ್ಚು ಶತಕ ಗಳಿಸಿರುವ ಸಕ್ರಿಯ ಆಟಗಾರರ ಪೈಕಿ ಜೋ ರೂಟ್ ಮುಂಚೂಣಿಯಲ್ಲಿದ್ದು, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (32 ಶತಕ), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (32 ಶತಕ) ಹಾಗೂ ಭಾರತದ ವಿರಾಟ್ ಕೊಹ್ಲಿ (29 ಶತಕ) ಅವರನ್ನು ಮೀರಿಸಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ರೂಟ್ ಶತಕಗಳ ಸಾಧನೆ ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 143 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 427 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 196ಕ್ಕೆ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 251ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಲಂಕಾ ಗೆಲುವಿಗೆ 483 ರನ್‌ಗಳ ಗುರಿ ಒಡ್ಡಿತ್ತು. ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ 23 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ:
ಸಚಿನ್ ತೆಂಡೂಲ್ಕರ್ (ಭಾರತ): 51
ಜ್ಯಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ): 45
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 41
ಕುಮಾರ ಸಂಗಕ್ಕರ (ಶ್ರೀಲಂಕಾ): 38
ರಾಹುಲ್ ದ್ರಾವಿಡ್ (ಭಾರತ): 36
ಯೂನಿಸ್ ಖಾನ್ (ಪಾಕಿಸ್ತಾನ): 34
ಸುನಿಲ್ ಗವಾಸ್ಕರ್ (ಭಾರತ): 34
ಬ್ರಿಯಾನ್ ಲಾರಾ (ವೆಸ್ಟ್‌ಇಂಡೀಸ್): 34
ಮಹೇಲಾ ಜಯವರ್ಧನೆ (ಶ್ರೀಲಂಕಾ): 34
ಜೋ ರೂಟ್ (ಇಂಗ್ಲೆಂಡ್): 34
ಆಲಿಸ್ಟಾರ್ ಕುಕ್ (ಇಂಗ್ಲೆಂಡ್): 33
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.