ಲಂಡನ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನಿಂಗ್ಸ್ ಹಾಗೂ 114 ರನ್‌ಗಳ ಭರ್ಜರಿ ಜಯ ಗಳಿಸಿದೆ. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮತ್ತೊಂದೆಡೆ ಇಂಗ್ಲೆಂಡ್ ತಂಡದ ಖ್ಯಾತ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿದ್ದಾರೆ. ಇದು ಆ್ಯಂಡರ್ಸನ್ ಅವರ ಕೊನೆಯ ಪಂದ್ಯವಾಗಿತ್ತು. ಕೊನೆಯ ಪಂದ್ಯದಲ್ಲೂ ಒಟ್ಟು ನಾಲ್ಕು ವಿಕೆಟ್ ಗಳಿಸಿ ತಮ್ಮ ಛಾಪು ಮೂಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್ ಎನಿಸಿರುವ ಆ್ಯಂಡರ್ಸನ್, ಒಟ್ಟಾರೆಯಾಗಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ವೃತ್ತಿ ಜೀವನ:
ಪಂದ್ಯ: 188
ವಿಕೆಟ್: 704
ಅತ್ಯುತ್ತಮ ಬೌಲಿಂಗ್ (ಇನಿಂಗ್ಸ್): 7/42
5 ವಿಕೆಟ್: 32
10 ವಿಕೆಟ್ (ಪಂದ್ಯದಲ್ಲಿ): 3
ಎಕಾನಮಿ: 2.79
ಅಟ್ಕಿನ್ಸನ್ ದಾಳಿಗೆ ತತ್ತರಿಸಿದ ವಿಂಡೀಸ್...
ಚೊಚ್ಚಲ ಪಂದ್ಯವನ್ನಾಡಿದ ಗಸ್ ಅಟ್ಕಿನ್ಸನ್ ಎರಡೂ ಇನಿಂಗ್ಸ್‌ನಲ್ಲಿ ತಲಾ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಅಟ್ಕಿನ್ಸನ್ (45ಕ್ಕೆ 7 ವಿಕೆಟ್) ದಾಳಿಗೆ ತತ್ತರಿಸಿದ ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 121ಕ್ಕೆ ಆಲೌಟ್ ಆಗಿತ್ತು.
ಇದಕುತ್ತರವಾಗಿ ಆಂಗ್ಲರ ಪಡೆ 371 ರನ್ ಗಳಿಸಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 250 ರನ್‌ಗಳ ಮುನ್ನಡೆ ಗಳಿಸಿತು. ಜ್ಯಾಕ್ ಕ್ರಾಲಿ (76), ಒಲ್ಲಿ ಪೋಪ್ (57), ಜೋ ರೂಟ್ (68), ಜೇಮಿ ಸ್ಮಿತ್ (70) ಹಾಗೂ ಹ್ಯಾರಿ ಬ್ರೂಕ್ (50) ಅರ್ಧಶತಕಗಳ ಸಾಧನೆ ಮಾಡಿದರು.
ದ್ವಿತೀಯ ಇನಿಂಗ್ಸ್‌ನಲ್ಲೂ ಅಟ್ಕಿನ್ಸನ್ ದಾಳಿಗೆ (61ಕ್ಕೆ 5 ವಿಕೆಟ್) ತತ್ತರಿಸಿದ ವಿಂಡೀಸ್ ಕೇವಲ 136ಕ್ಕೆ ಆಲೌಟ್ ಆಯಿತು. ಆ ಮೂಲಕ ಅಟ್ಕಿನ್ಸನ್ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ಗಳನ್ನು ಗಳಿಸಿ ಮಿಂಚಿದರು.
ಬೆನ್ ಸ್ಟೋಕ್ಸ್ ದಾಖಲೆ...
ಇದೇ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಸಾಧನೆ ಮಾಡಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 6,000ಕ್ಕಿಂತ ಹೆಚ್ಚು ರನ್ ಹಾಗೂ 200 ವಿಕೆಟ್ ಗಳಿಸಿದ ವಿಶ್ವದ ಮೂರನೇ ಆಲ್‌ರೌಂಡ್ ಆಟಗಾರ ಎನಿಸಿದರು.
ಆ ಮೂಲಕ ದಿಗ್ಗಜರಾದ ವೆಸ್ಟ್‌ಇಂಡೀಸ್‌ನ ಗ್ಯಾರಿ ಸೋಬರ್ಸ್ ಹಾಗೂ ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲಿಸ್ ಅವರ ಸಾಲಿಗೆ ಸೇರ್ಪಡೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.