ಲಂಡನ್: ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ ಮತ್ತು ಜಾನಿ ಬೇಸ್ಟೊ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಕುಸಿತದಿಂದ ಪಾರಾಯಿತು.
ದಿ ಓವಲ್ ಕ್ರೀಡಾಂಗಣದಲ್ಲಿ 66 ಓವರುಗಳ ಆಟದ ನಂತರ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 335 ರನ್ ಗಳಿಸಿದೆ. ಒಂದು ಹಂತದಲ್ಲಿ ಆತಿಥೇಯ ತಂಡ 4 ವಿಕೆಟ್‌ಗಳನ್ನು 222 ರನ್‌ಗಳಾಗುಷ್ಟರಲ್ಲಿ ಕಳೆದುಕೊಂಡಿತ್ತು. ಆದರೆ 9 ರನ್‌ಗಳಿಂದ ಶತಕ ಕಳೆದುಕೊಂಡ ಜೋ ರೂಟ್ ಮತ್ತು ಜಾನಿ ಬೇಸ್ಟೊ (ಬ್ಯಾಟಿಂಗ್ 70, 4x10) ಅವರು ಐದನೇ ವಿಕೆಟ್‌ಗೆ 110 ರನ್ ಸೇರಿಸಿ ಕುಸಿತ ತಡೆಗಟ್ಟಿದರು.
ರೂಟ್ 106 ಎಸೆತಗಳನ್ನೆದುರಿಸಿ ಒಂದು ಸಿಕ್ಸರ್, 11 ಬೌಂಡರಿಗಳಿದ್ದ 91 ರನ್ ಬಾರಿಸಿದರು.
ಇದಕ್ಕೆ ಮೊದಲು, 12 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜಾಕ್ ಕ್ರಾಲಿ (73) ಮತ್ತು ಬೆನ್ ಡಕೆಟ್ (42) ಅವರು 17 ಓವರುಗಳಲ್ಲಿ 79 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಹಾಲಿ ಸರಣಿಯಲ್ಲಿ ಮಿಂಚಿರುವ ಕ್ರಾಲಿ, 9 ಇನಿಂಗ್ಸ್‌ಗಳಿಂದ 480 ರನ್ ಕಲೆಹಾಕಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಆಡಿದ ನಾಯಕ ಬೆನ್ ಸ್ಟೋಕ್ಸ್ 42 ರನ್ ಹೊಡೆದು ಲಂಚ್ ನಂತರ ನಿರ್ಗಮಿಸಿದರು. ಸ್ಟೋಕ್ಸ್ ಅವರ ವಿಕೆಟ್ ಪಡೆದ ಆಫ್ ಸ್ಪಿನ್ನರ್ ಟಾಡ್ ಮರ್ಫಿ ಕೊನೆಗೆ ಶತಕದತ್ತ ಸಾಗುತ್ತಿದ್ದ ರೂಟ್ ಅವರನ್ನು ಬೌಲ್ಡ್ ಮಾಡಿ ಇಂಗ್ಲೆಂಡ್ ಧಾವಂತಕ್ಕೆ ಲಗಾಮು ತೊಡಿಸಿದರು.
ಸ್ಕೋರುಗಳು
ಮೊದಲ ಇನಿಂಗ್ಸ್: ಇಂಗ್ಲೆಂಡ್: 283; ಆಸ್ಟ್ರೇಲಿಯಾ: 295;
ಎರಡನೇ ಇನಿಂಗ್ಸ್: ಇಂಗ್ಲೆಂಡ್: 5 ವಿಕೆಟ್‌ಗೆ 335 (66 ಓವರ್ ನಂತರ) (ಕ್ರಾಲಿ 73, ಡಕೆಟ್ 42, ಸ್ಟೋಕ್ಸ್ 42, ರೂಟ್ 91, ಬೇಸ್ಟೊ ಬ್ಯಾಟಿಂಗ್ 70; ಮರ್ಫಿ 80ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.