ಲಂಡನ್: ಇಂಗ್ಲೆಂಡ್‌ನ ಆಲ್‌ರೌಂಡರ್ ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಪಂದ್ಯಗಳತ್ತ ಹೆಚ್ಚು ಗಮನಹರಿಸುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಮೊಯೀನ್ ಅವರು ತಮ್ಮ ವೃತ್ತಿಜೀವನವನ್ನು ವಿಸ್ತರಿಸಲು ಮತ್ತು ಆಟದ ಮೇಲಿನ ಒಲವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಕ್ರಿಕೆಟ್‌ನ ದೀರ್ಘಾವಧಿಯ ಸ್ವರೂಪಕ್ಕೆ ವಿದಾಯ ಹೇಳಲು ಬಯಸಿದ್ದಾರೆ.
‘ಆಡುವ ಬಯಕೆ ಇರುವವರೆಗೂ ಕಣಕ್ಕಿಳಿಯುತ್ತೇನೆ. ಕ್ರಿಕೆಟ್‌ಅನ್ನು ಆಸ್ವಾದಿಸುತ್ತೇನೆ. ಟೆಸ್ಟ್ ಮಾದರಿ ಅದ್ಭುತವಾದದ್ದು. ಉತ್ತಮ ಲಯದಲ್ಲಿದ್ದಾಗ ಎಲ್ಲ ಮಾದರಿಗಳಿಗಿಂತ ಇದು ಬಹಳ ಉತ್ತಮವಾಗಿರುತ್ತದೆ. ವಿಶ್ವಶ್ರೇಷ್ಠ ಆಟಗಾರರೊಂದಿಗೆ ಆಡುವ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇನೆ‘ ಎಂದು ಮೋಯಿನ್ ಇಎಸ್‌ಪಿಎನ್ ಕ್ರಿಕ್‌ಇನ್ಫೊಗೆ ತಿಳಿಸಿದ್ದಾರೆ.
‘ಟೆಸ್ಟ್ ಕ್ರಿಕೆಟ್‌ಅನ್ನು ಆಸ್ವಾದಿಸಿದ್ದೇನೆ. ಆದರೆ ಕೆಲವೊಮ್ಮೆ ಅದು ಹೆಚ್ಚು ಸಾಮರ್ಥ್ಯವನ್ನು ಬಯಸುತ್ತದೆ‘ ಎಂದು ಅವರು ನುಡಿದರು.
2014ರಲ್ಲಿ ಹೆಡಿಂಗ್ಲೆಯಲ್ಲಿ ನಡೆದ ಶ್ರೀಲಂಕಾ ಎದುರಿನ ಪಂದ್ಯದ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು, ಅರೆಕಾಲಿಕ ಆಫ್ ಸ್ಪಿನ್ನರ್ ಆಗಿದ್ದರು.
2019ರ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಮೋಯಿನ್ ಆಡಿದ್ದಾರೆ. ಇದಾದ ಬಳಿಕ ನಡೆದ ಆ್ಯಷಸ್ ಸರಣಿಯಲ್ಲಿ ಅವರು ಕೇವಲ ಒಂದು ಟೆಸ್ಟ್ ಆಡಿದ್ದರು. ಅಲ್ಲದೆ ಕೇಂದ್ರ ಗುತ್ತಿಗೆಯಿಂದ ಅವರನ್ನು ಕೈಬಿಡಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಭಾರತದ ಎದುರು ಓವಲ್‌ನಲ್ಲಿ ಅವರು ಕೊನೆಯ ಟೆಸ್ಟ್ ಆಡಿದ್ದರು. ಈ ಪಂದ್ಯದಲ್ಲಿ ಉಪನಾಯಕರಾಗಿದ್ದ ಅವರು 35 ರನ್ ಹಾಗೂ ಎರಡು ವಿಕೆಟ್ ಗಳಿಸಿದ್ದರು.
ಹೋದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಮೋಯಿನ್, ನಾಸಿರ್ ಹುಸೇನ್ (2003) ನಂತರ ಇಂಗ್ಲೆಂಡ್ ತಂಡದ ನಾಯಕನಾದ ಮೊದಲ ಏಷ್ಯನ್ ಮೂಲದ ಬ್ರಿಟಿಷ್ ಆಟಗಾರ ಎನಿಸಿಕೊಂಡಿದ್ದರು.
ಮೋಯಿನ್ ಅಲಿ ಟೆಸ್ಟ್ ಸಾಧನೆ
ಪಂದ್ಯ 64
ರನ್ 2914
ಗರಿಷ್ಠ 155*
ಬ್ಯಾಟಿಂಗ್ ಸರಾಸರಿ 28.29
ಶತಕ 5
ಗಳಿಸಿದ ವಿಕೆಟ್ 195
ಶ್ರೇಷ್ಠ ಬೌಲಿಂಗ್ (ಇನಿಂಗ್ಸ್) 53ಕ್ಕೆ6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.