ಲಂಡನ್ : ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಂಡದಲ್ಲಿ ಪರಿವರ್ತನೆಯ ಹಾದಿ ಮುಂದುವರಿದಿದೆ. ಕಳೆದ ವರ್ಷ ವೇಗದ ಬೌಲಿಂಗ್ ದಿಗ್ಗಜ ಸ್ಟುವರ್ಟ್ ಬ್ರಾಡ್ ಮತ್ತು ಈ ವರ್ಷ ಮತ್ತೊಬ್ಬ ಅನುಭವಿ ಜಿಮ್ಮಿ ಆ್ಯಂಡರ್ಸನ್ ಆಟಕ್ಕೆ ವಿದಾಯ ಹೇಳಿದ್ದರು
37 ವರ್ಷದ ಅಲಿ, ಅವರನ್ನು ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರುಗಳ ಸರಣಿಗೆ ಕೈಬಿಡಲಾಗಿತ್ತು. ‘ಮುಂದಿನ ಪೀಳಿಗೆಯ ಆಟಗಾರಿಗೆ ಅವಕಾಶ ನೀಡಲು ಇದು ಸಮಯ’ ಎಂದು ಅವರು ಬ್ರಿಟಿಷ್ ಪತ್ರಿಕೆ ‘ಡೇಲಿ ಮೇಲ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಇದು ಸರಿಯಾದ ಸಮಯ. ನನ್ನ ಪಾತ್ರ ಮುಗಿದಿದೆ’ ಎಂದು ಅಲಿ ಹೇಳಿದ್ದಾರೆ. 68 ಟೆಸ್ಟ್, 138 ಏಕದಿನ ಮತ್ತು 92 ಟಿ20 ಪಂದ್ಯಗಳಲ್ಲಿ ಅವರು ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಎರಡೂ ಮಾದರಿಗಳಲ್ಲಿ (ಟಿ20, ಏಕದಿನ) ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಅವರು ಆಡಿದ್ದರು.
‘ಇನ್ನೂ ಕೆಲವು ದಿನ ಕಾದು ಮತ್ತೆ ಇಂಗ್ಲೆಂಡ್ ತಂಡಕ್ಕೆ ಆಡಲು ಪ್ರಯತ್ನಿಸಬಹುದಿತ್ತು. ಆದರೆ ವಾಸ್ತವದಲ್ಲಿ ಇದು ಆಗದು’ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಹೆಡ್ ಕೋಚ್ ಮ್ಯಾಥ್ಯೂ ಮಾಟ್ ಅವರನ್ನು ಕಿತ್ತುಹಾಕಲಾಗಿತ್ತು. ಪರಿವರ್ತನೆಯ ಮುಂದುವರಿದ ಭಾಗವಾಗಿ ಅನುಭವಿಗಳಾದ ಅಲಿ ಮತ್ತು ಜಾನಿ ಬೇಸ್ಟೊ ಅವರಿಗೆ ತಂಡದಿಂದ ಕೊಕ್ ನೀಡಲಾಗಿತ್ತು.
ಹೊಸಬರನ್ನು ಬೆಳೆಸಲಾಗುತ್ತಿದ್ದು ಸ್ಪಿನ್ನರ್ ಶೋಯೆಬ್ ಬಷೀರ್ ಮತ್ತು 20 ವರ್ಷ ವೇಗಿ ಜೋಶ್ ಹಲ್ ಅವರು ಅವಕಾಶ ಪಡೆಯುತ್ತಿದ್ದಾರೆ.
68 ಟೆಸ್ಟ್ ಪಂದ್ಯಗಳಲ್ಲಿ ಎಡಗೈ ಬ್ಯಾಟರ್ ಮೊಯಿನ್ 3,094 ರನ್ (28.12 ಸರಾಸರಿ) ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳಿದ್ದು ಅಜೇಯ 155 ಅತ್ಯಧಿಕ ಮೊತ್ತ. ಆಫ್ ಸ್ಪಿನ್ ದಾಳಿಯಲ್ಲಿ 37.31 ಸರಾಸರಿಯಲ್ಲಿ 204 ವಿಕೆಟ್ ಪಡೆದಿದ್ದಾರೆ. 138 ಏಕದಿನ ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 2,355 ರನ್ (24.27 ಸರಾಸರಿ) ಗಳಿಸಿದ್ದಾರೆ. 111 ವಿಕೆಟ್‌ಗಳನ್ನು ಪಡೆದಿದ್ದಾರೆ. 128 ಅತ್ಯಧಿಕ ಮೊತ್ತ. 92 ಟಿ20 ಪಂದ್ಯಗಳಲ್ಲಿ 1229 ರನ್ ಗಳಿಸಿದ್ದಾರೆ. 27.13 ಸರಾಸರಿಯಲ್ಲಿ 51 ವಿಕೆಟ್ ಪಡೆದಿದ್ದಾರೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅವರು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.