ADVERTISEMENT

ನೀವು ಸೇಡಿನ ಬಗ್ಗೆ ಯೋಚಿಸಿದರೂ, ಅವರು ಸ್ನೇಹಪರರು: ಕಿವೀಸ್ ಬಗ್ಗೆ ಕೊಹ್ಲಿ ಮಾತು

ಏಜೆನ್ಸೀಸ್
Published 23 ಜನವರಿ 2020, 11:14 IST
Last Updated 23 ಜನವರಿ 2020, 11:14 IST
   
""

ಆಕ್ಲೆಂಡ್ (ನ್ಯೂಜಿಲೆಂಡ್): 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಎದುರು ಕೇವಲ 17 ರನ್‌ ಅಂತರದಿಂದ ಸೋಲು ಕಂಡಿತ್ತು. ಇಂಗ್ಲೆಂಡ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಕಳೆದ ವರ್ಷ ಜುಲೈ 9ರಂದು ನಡೆದಿದ್ದ ಆ ಪಂದ್ಯದ ಬಳಿಕ ಈ ತಂಡಗಳು ಇದುವರೆಗೆ ಮುಖಾಮುಖಿಯಾಗಿರಲಿಲ್ಲ. ಹೀಗಾಗಿ ಕಿವೀಸ್‌ ನಾಡಿನಲ್ಲಿ ನಾಳೆಯಿಂದ ಆರಂಭವಾಗಲಿರುವ 5 ಟಿ20, ಮೂರು ಏಕದಿನ ಹಾಗೂ 2ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿಕೇನ್‌ ವಿಲಿಯಮ್ಸನ್‌ ನೇತೃತ್ವದ ‘ಬ್ಲಾಕ್‌ ಕ್ಯಾಪ್ಸ್‌’ ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್‌ ಕೊಹ್ಲಿಯ ‘ಬ್ಲೂ ಬಾಯ್ಸ್‌’ ಹೊಂಚುಹಾಕಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಆದರೆ, ಈ ಎಲ್ಲ ಚರ್ಚೆಗಳನ್ನು ಅಲ್ಲಗಳೆದಿರುವ ಕೊಹ್ಲಿ, ವಿಲಿಯಮ್ಸನ್‌ ಪಡೆಯು ಸ್ನೇಹಪರವಾದದ್ದು ಎಂದಿದ್ದಾರೆ.

ಮೊದಲ ಟಿ20 ಪಂದ್ಯ ಶುಕ್ರವಾರ (ಜನವರಿ 24 ರಂದು) ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನಕೊಹ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಎದುರಾದ ‘ಕಿವೀಸ್‌ ವಿರುದ್ಧ ಸೇಡು ತೀರಿಸಿಕೊಳ್ಳುವಿರಾ’ ಎಂಬ ‌ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀವು ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸಿದರೂ, ಅವರು (ಕಿವೀಸ್‌ ತಂಡ) ಸ್ನೇಹಪರರು. ಹೀಗಾಗಿ ಸೇಡು ಎನ್ನುವಷ್ಟರ ಮಟ್ಟಕ್ಕೆ ಹೋಗಲು ಸಾಧ್ಯವೇ ಇಲ್ಲ. ಇದೆಲ್ಲವು (ಸೇಡು ಎಂಬುದು) ಇಲ್ಲಿರುವ ಸ್ಪರ್ಧೆ ಅಷ್ಟೇ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ತಂಡಗಳಿಗೆ ಮತ್ತು ಹೇಗೆ ಒಟ್ಟಾಗಿ ಹೋರಾಟ ನಡೆಸಬೇಕು ಎಂಬುದಕ್ಕೆ ಈ ತಂಡವು ಒಂದು ಅತ್ಯುತ್ತಮ ಉದಾಹರಣೆ’

’ನಮ್ಮ ನಡುವೆ ಉತ್ತಮ ಒಡನಾಟವಿದೆ. ಅವರೇನು ಅಸಭ್ಯರಲ್ಲ ಎಂಬುದನ್ನು ಅವರ ಆಟವನ್ನು ನೋಡುವಾಗ ನೀವೇ ಹೇಳಬಲ್ಲಿರಿ. ನಾವಿಬ್ಬರು ಪರಸ್ಪರ ಸಾಕಷ್ಟು ಗೌರವವನ್ನು ಹೊಂದಿದ್ದೇವೆ. ಅವರು ನಮ್ಮನ್ನು ಸೋಲಿಸಿ ಫೈನಲ್‌ ತಲುಪಿದಾಗ ಖಂಡಿತವಾಗಿಯೂ ನಾವು ಸಂತಸಗೊಂಡಿದ್ದೆವು. ಏಕೆಂದರೆ ಯಾವಾಗ ನಾವು ಕಳೆದುಕೊಳ್ಳುತ್ತೇವೋ ಆಗ ಅದಕ್ಕಿಂತಲೂ ದೊಡ್ಡದರತ್ತ ಚಿತ್ತಹರಿಸಬೇಕಾಗುತ್ತದೆ’ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಉಭಯ ಕೊಹ್ಲಿ ಮತ್ತು ಕೇನ್

ಸದ್ಯದ ಪ್ರವಾಸಕ್ಕೆ ಗಾಯಾಳು ಶಿಖರ್‌ ಧವನ್‌ ಅಲಭ್ಯರಾಗಿರುವುದರಿಂದ ಹಲವು ಗೊಂದಲಗಳು ಕೊಹ್ಲಿ ಪಡೆ ಎದುರಲ್ಲಿವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಬೇರೆ ಬೇರೆ ಕ್ರಮಾಂಕದಲ್ಲಿ ಆಡಿದ್ದರು. ವಿಕೆಟ್‌ ಕೀಪರ್ ಜವಾಬ್ದಾರಿಯನ್ನೂ ನಿಭಾಯಿಸಬೇಕಿರುವ ಅವರು, ಧವನ್‌ ಬದಲು ಇನಿಂಗ್ಸ್‌ ಆರಂಭಿಸುವರೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡುವರೇ ಎಂಬಿತ್ಯಾದಿ ಪ್ರಶ್ನೆಗಳು ತಲೆದೋರಿವೆ. ಈ ಬಗ್ಗೆ ಮಾತನಾಡಿರುವ ಕೊಹ್ಲಿ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಸುಳಿವು ನೀಡಿದ್ದಾರೆ.

‘ಇದು (ಧವನ್‌ ಗಾಯಾಳಾಗಿರುವುದು) ನಮ್ಮ ಕೆಲವು ಯೋಜನೆಗಳನ್ನು ಖಂಡಿತಾ ಬದಲಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಂತೆಏಕದಿನ ಸರಣಿಯಲ್ಲಿ ಮುನ್ನಡೆಯಲಿದ್ಧೇವೆ. ಮತ್ತೊಬ್ಬ ಆಟಗಾರನಿಗೆ ಅಗ್ರ ಕ್ರಮಾಂಕದ (ಇನಿಂಗ್ಸ್‌ ಆರಂಭಿಸುವ) ಹೊಣೆ ನೀಡಲಿದ್ದೇವೆ. ರಾಜ್‌ಕೋಟ್‌ನಲ್ಲಿ ಚೆನ್ನಾಗಿ ಆಡಿದ್ದ ರಾಹುಲ್‌ ಅದೇ (5ನೇ) ಕ್ರಮಾಂಕದಲ್ಲೇ ಬ್ಯಾಟಿಂಗ್‌ ಮಾಡಲಿದ್ದಾರೆ’

‘ಟಿ20 ಸರಣಿಗೆ ಖಂಡಿಯಾ ಕೆಲವು ಬದಲಾವಣೆಗಳಾಗಲಿವೆ. ಕೆಳ ಕ್ರಮಾಂಕದಲ್ಲಿ ಚೆನ್ನಾಗಿ ಆಡುವವರಿದ್ದಾರೆ. ಇಲ್ಲಿ ಸಾಕಷ್ಟು ಆಯ್ಕೆಗಳು ನಮ್ಮ ಮುಂದಿರುವುದರಿಂದ,ರಾಹುಲ್‌ರನ್ನು ಅಗ್ರಕ್ರಮಾಂಕದಲ್ಲೇ ಬ್ಯಾಟಿಂಗ್‌ ಮಾಡಲು ಬಿಟ್ಟು ಹೆಚ್ಚುವರಿಯಾಗಿ ಇನ್ನೊಬ್ಬ ಬ್ಯಾಟ್ಸ್‌ಮನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಿದ್ದೇವೆ. ಅವರಿಂದಲೂ (ಹೆಚ್ಚುವರಿ ಬ್ಯಾಟ್ಸ್‌ಮನ್‌) ಉತ್ತಮ ಬ್ಯಾಟಿಂಗ್ ಮಾಡುವುದಾದರೆ ಯಾಕೆ ಬೇಡ. ನಾವು ಆಲೋಚಿಸುತ್ತಿರುವುದು ಇದನ್ನು. ತಂಡದ ಸಮತೋಲವನ್ನೂ ಕಾಪಾಡಿಕೊಳ್ಳಬಹುದು. ಇದರಿಂದ ಬೇರೆ ಆಟಗಾರರ ಮೇಲಾಗುವ ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತವೆ ಎಂಬುದು ನಮಗೆ ಚೆನ್ನಾಗಿ ಗೊತ್ತು. ಆದರೆ, ನಮಗೆ ತಂಡದ ಅವಶ್ಯಕತೆ ಏನು ಮತ್ತು ಅದರಂತೆ ಅತ್ಯುತ್ತಮವಾಗಿ ಸಮತೋಲನ ಕಂಡುಕೊಳ್ಳುವುದೇ ಮುಖ್ಯ. ರಾಹುಲ್‌ ಸಂಪೂರ್ಣವಾಗಿ ತಂಡದ ಆಟಗಾರ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆಸಿಸ್ ವಿರುದ್ಧದ ಸರಣಿಯಲ್ಲಿ ರಾಹುಲ್‌ ವಿವಿಧ ಕ್ರಮಾಂಕದಲ್ಲಿ ಆಡಿದ್ದರು. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್‌, ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆರಂಭಿಕ ಶಿಖರ್‌ ಧವನ್‌ ಗಾಯಗೊಂಡಿದ್ದರಿಂದ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಈ ಪಂದ್ಯಗಳಲ್ಲಿ ಕ್ರಮವಾಗಿ 47, 80 ಮತ್ತು 19 ರನ್ ಗಳಿಸಿದ್ದರು.

ಜನವರಿ 19ರಂದು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿಸಿದ್ದ ಕೊಹ್ಲಿ ಪಡೆ,ಕೇವಲ 5 ದಿನಗಳ ಅಂತರದಲ್ಲೇ ದೂರದ ನ್ಯೂಜಿಲೆಂಡ್‌ನಲ್ಲಿ ಆಡಲು ಸಜ್ಜಾಗಿದೆ. ಈ ರೀತಿಯಬಿಡುವಿಲ್ಲದ ವೇಳಾಪಟ್ಟಿ ಪಟ್ಟಿಯ ಕುರಿತು ಹಾಸ್ಯಭರಿತವಾಗಿ ಮಾತನಾಡಿದ ಕೊಹ್ಲಿ, ‘ನಾವು ನೇರವಾಗಿ ಕ್ರೀಡಾಂಗಣದಲ್ಲೇ ಇಳಿದುಕೊಳ್ಳುವಂತಾಗಲುಇದು (ವೇಳಾಪಟ್ಟಿ) ನಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಕೊಂಡೊಯ್ಯುತ್ತಿದೆ. ಅಷ್ಟರ ಮಟ್ಟಿಗೆ (ಸರಣಿಗಳ ನಡುವಿನ) ಅಂತರ ಕಡಿಮೆಯಾಗುತ್ತಿದೆ. ಭಾರತಕ್ಕಿಂತ ಏಳು ತಾಸು ಮುಂದಿರುವ ಪ್ರದೇಶಕ್ಕೆ ಶೀಘ್ರ ಹೊಂದಿಕೊಳ್ಳುವುದು ಮತ್ತುಈ ರೀತಿಯ ಪ್ರಯಾಣ ಖಂಡಿತವಾಗಿಯೂ ಕಠಿಣವಾದುದ್ದು. ಇಂತವುಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.