ADVERTISEMENT

ನಮಗೀಗ ಪ್ರತಿ ಪಂದ್ಯ ಸೆಮಿಫೈನಲ್ ಇದ್ದಂತೆ: ಆರ್‌ಸಿಬಿ ಕೋಚ್ ಆ್ಯಂಡಿ ಫ್ಲವರ್

ಪಿಟಿಐ
Published 16 ಏಪ್ರಿಲ್ 2024, 10:59 IST
Last Updated 16 ಏಪ್ರಿಲ್ 2024, 10:59 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಮುಖ್ಯ ಕೋಚ್‌&nbsp;ಆ್ಯಂಡಿ ಫ್ಲವರ್</p></div>

ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಮುಖ್ಯ ಕೋಚ್‌ ಆ್ಯಂಡಿ ಫ್ಲವರ್

   

ಪಿಟಿಐ ಚಿತ್ರಗಳು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ 6 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉಳಿದಿರುವ ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ರೀತಿ ಭಾವಿಸಿ ಆಡಬೇಕಿದೆ ಎಂದು ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.

ADVERTISEMENT

ಹೈದರಾಬಾದ್‌ ವಿರುದ್ಧ 25 ರನ್‌ಗಳ ವೀರೋಚಿತ ಸೋಲು ಕಂಡ ಆರ್‌ಸಿಬಿ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ.

‘ಇದು ಖಂಡಿತಾ ನೌಕೌಟ್ ಸಮಯ. ಪ್ರತೀ ಪಂದ್ಯವೂ ಈಗ ನಮಗೆ ಸೆಮಿಫೈನಲ್ ಇದ್ದಂತೆ. ನಾವು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಬಗ್ಗೆ ಯೋಚಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ ಹೈದರಾಬಾದ್ ಬ್ಯಾಟರ್‌ಗಳು 287 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿದ್ದರು. ಆ ದಿನ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ಫ್ಲವರ್ ಒಪ್ಪಿಕೊಂಡಿದ್ದಾರೆ.

ಸೋಲಿನಲ್ಲೂ ಅಬ್ಬರಿಸಿದ ಆರ್‌ಸಿಬಿ ಬ್ಯಾಟರ್‌ಗಳ ಧನಾತ್ಮಕ ಪ್ರವೃತ್ತಿಯನ್ನು ಫ್ಲವರ್ ಮೆಚ್ಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಸಿಡಿಸಿದರೆ, ಡುಪ್ಲೆಸಿ 28 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.

‘ಬೃಹತ್ ಮೊತ್ತದೆದುರು ನಮ್ಮ ಹೋರಾಟದ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಇದೆ. ನಾವು ಸೋತಿರಬಹುದು. ಆದರೆ, ನಮ್ಮ ಬ್ಯಾಟರ್‌ಗಳು ಹೋರಾಡಿದ ರೀತಿ ಬಗ್ಗೆ ಹೆಮ್ಮೆ ಇದೆ’ ಎಂದೂ ಫ್ಲವರ್ ಕೊಂಡಾಡಿದ್ದಾರೆ.

‘ದಿನೇಶ್ ಕಾರ್ತಿಕ್ ಅವರ ಈ ಪ್ರದರ್ಶನ ಟಿ–20 ವಿಶ್ವಕಪ್ ಸರಣಿಗೆ ಭಾರತ ತಂಡಕ್ಕೆ ಅವರ ಆಯ್ಕೆಗೆ ಉತ್ತೇಜನ ಕೊಟ್ಟಿದೆ’ ಎಂದಿದ್ದಾರೆ.

ಮುಂದಿನ ಪಂದ್ಯದಲ್ಲಿ ಏಪ್ರಿಲ್ 21ರಂದು ಆರ್‌ಸಿಬಿ, ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.