ADVERTISEMENT

ಜಯದ ಲಯ ಮುಂದುವರಿಸುವತ್ತ ಮನೀಷ್ ಬಳಗದ ಚಿತ್ತ

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ: ಕರ್ನಾಟಕ–ರೈಲ್ವೆ ಮುಖಾಮುಖಿ ಇಂದು

ಗಿರೀಶದೊಡ್ಡಮನಿ
Published 3 ಅಕ್ಟೋಬರ್ 2018, 19:46 IST
Last Updated 3 ಅಕ್ಟೋಬರ್ 2018, 19:46 IST
ಕೃಷ್ಣಪ್ಪ ಗೌತಮ್
ಕೃಷ್ಣಪ್ಪ ಗೌತಮ್   

ಬೆಂಗಳೂರು: ನಾಕೌಟ್ ಹಾದಿಯಿಂದ ಬಹುತೇಕ ಹೊರಬಿದ್ದಿರುವ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಎಲೀಟ್ ’ಎ’ ಗುಂಪಿನ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಕರ್ನಾಟಕ ತಂಡವು ರೈಲ್ವೆಸ್ ವಿರುದ್ಧ ಆಡಲಿದೆ. ಈ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಕರ್ನಾಟಕ ಮೂರರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಸತತ ಸೋಲಿನ ಕಾರಣ ಸೆ.30ರಂದು ನಡೆದಿದ್ದ ವಿದರ್ಭ ಎದುರಿನ ಪಂದ್ಯಕ್ಕೆ ತಂಡದ ನಾಯಕತ್ವ ಬದಲಿಸಲಾಗಿತ್ತು. ವಿನಯಕುಮಾರ್ ಬದಲಿಗೆ ಮನೀಷ್ ಪಾಂಡೆಗೆ ಹೊಣೆ ನೀಡಲಾಗಿತ್ತು.

ಆ ಪಂದ್ಯದಲ್ಲಿ ಕರ್ನಾಟಕವು ಆರು ವಿಕೆಟ್‌ಗಳಿಂದ ಗೆದ್ದಿತ್ತು. ಆದರೆ ಗುಂಪಿನಲ್ಲಿರುವ ಮುಂಬೈ, ಮಹಾರಾಷ್ಟ್ರ ಮತ್ತು ಬರೋಡಾ ತಂಡಗಳು ಹೆಚ್ಚು ಅಂಕ ಗಳಿಸಿ ಮೇಲಿನ ಕ್ರಮಾಂಕದಲ್ಲಿವೆ. ಆದ್ದರಿಂದ ಕರ್ನಾಟಕ ತಂಡವು ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಗೆದ್ದರೂ ನಾಕೌಟ್ ಹಂತ ತಲುಪುವುದು ಅಸಾಧ್ಯ.

ADVERTISEMENT

ಆದರೆ ಈ ಪಂದ್ಯಗಳ ಗೆಲುವಿನಿಂದಾಗಿ ಮುಂದಿನ ತಿಂಗಳು ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಕರ್ನಾಟಕ ತಂಡವು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬಹುದು. ರಣಜಿ ಟೂರ್ನಿಯಲ್ಲಿ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಯುವ ಆಟಗಾರರು ಆಯ್ಕೆದಾರರ ಗಮನ ಸೆಳೆಯಲೂ ಈ ಪಂದ್ಯಗಳು ವೇದಿಕೆಯಾಗಲಿವೆ.

ವಿದರ್ಭ ಎದುರಿನ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಆಲ್‌ರೌಂಡ್ ಆಟವಾಡಿದ್ದರು. ಕೆ. ಗೌತಮ್ ಉತ್ತಮ ಬೌಲಿಂಗ್ ಮಾಡಿದ್ದರು. ಆರಂಭಿಕ ಜೋಡಿ ಅಭಿಷೇಕ್ ರೆಡ್ಡಿ ಮತ್ತು ಎಂ.ಜಿ. ನವೀನ್ ಅವರು ಇನ್ನೂ ಉತ್ತಮವಾಗಿ ಆಡುವ ಅಗತ್ಯ ಇದೆ. ಮೀರ್ ಕೌನೇನ್ ಅಬ್ಭಾಸ್ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಪವನ್ ದೇಶಪಾಂಡೆ ಮತ್ತು ಆರ್. ಸಮರ್ಥ್ ಕೂಡ ಉತ್ತಮ ಲಯವನ್ನು ಮುಂದುವರಿಸುವ ಛಲದಲ್ಲಿದ್ಧಾರೆ.

ವೆಸ್ಟ್ ಇಂಡೀಸ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವನ್ ತಂಡದಲ್ಲಿ ಆಡಲು ತೆರಳಿದ್ದ ಕರುಣ್ ನಾಯರ್ ಮತ್ತು ಪ್ರಸಿದ್ಧ ಕೃಷ್ಣ ತಂಡಕ್ಕೆ ಮರಳುವ ಬಗ್ಗೆ ಮೂಲಗಳು ಖಚಿತಪಡಿಸಿಲ್ಲ.

ಆರು ಪಂದ್ಯಗಳನ್ನು ಆಡಿರುವ ರೈಲ್ವೆ ತಂಡವು ಒಂದೂ ಪಂದ್ಯದಲ್ಲಿ ಗೆದ್ದಿಲ್ಲ. ಸೌರಭ್ ವಾಕಸ್ಕರ್ ನಾಯಕತ್ವದ ತಂಡವು ನಾಕೌಟ್ ಹಂತ ತಲುಪುವುದು ಅಸಾಧ್ಯ. ಕರ್ನಾಟಕ ತಂಡಕ್ಕೆ ಹೋಲಿಸಿದರೆ ರೈಲ್ವೆಸ್ ದುರ್ಬಲವಾಗಿದೆ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಅಭಿಷೇಕ್ ರೆಡ್ಡಿ, ಎಂ.ಜಿ. ನವೀನ್, ಆರ್. ಸಮರ್ಥ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಅಭಿಮನ್ಯು ಮಿಥುನ್, ಆರ್. ವಿನಯಕುಮಾರ್, ಜೆ. ಸುಚಿತ್, ಮೀರ್ ಕೌನೇನ್ ಅಬ್ಬಾಸ್, ಪವನ್ ದೇಶಪಾಂಡೆ, ಕರುಣ್ ನಾಯರ್, ಕೆ. ಗೌತಮ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಪ್ರಸಿದ್ಧ ಕೃಷ್ಣ. ಯರೇಗೌಡ (ಕೋಚ್).

ರೈಲ್ವೆಸ್: ಸೌರಭ್ ವಾಕಸ್ಕರ್ (ನಾಯಕ), ಅನುರೀತ್ ಸಿಂಗ್, ಆಶಿಶ್ ಯಾದವ್, ಅವಿನಾಶ್ ಯಾದವ್, ಅಮಿತ್ ಪಾಣಿಕರ್ (ವಿಕೆಟ್‌ಕೀಪರ್), ಪ್ರಶಾಂತ್ ಅವಸ್ತಿ, ಮೃಣಾಲ್ ದೇವಧರ್, ಅರಿಂದಮ್ ಘೋಷ್, ಕರಣ್ ಶರ್ಮಾ, ಮಧುರ್ ಖತ್ರಿ, ಮಂಜೀತ್ ಸಿಂಗ್, ಚಂದ್ರಕಾಂತ್ ಸಕುರೆ, ಅಂಕಿತ್ ಯಾದವ್, ಅಮಿತ್ ಮಿಶ್ರಾ, ಹರ್ಷ ತ್ಯಾಗಿ, ಎಸಿಪಿ ಮಿಶ್ರಾ, ಆಕಾಶ್ ರಾವ್, ಮನೀಷ್ ರಾವ್.

ಪಂದ್ಯ ಅರಂಭ: ಬೆಳಿಗ್ಗೆ 9

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.