ADVERTISEMENT

ಟಿ20 ವಿಶ್ವಕಪ್‌ ಆಡಲಿದ್ದಾರೆ ವಿಲಿಯರ್ಸ್: ಕೋಚ್ ಹೇಳಿಕೆಗೆ ನಾಯಕ ಪ್ಲೆಸಿ ಸಮರ್ಥನೆ

ನಿವೃತ್ತಿ ನಿರ್ಧಾರದಿಂದ ವಾಪಸ್

ಏಜೆನ್ಸೀಸ್
Published 17 ಡಿಸೆಂಬರ್ 2019, 9:45 IST
Last Updated 17 ಡಿಸೆಂಬರ್ 2019, 9:45 IST
   

ಪಾರ್ಲ್‌ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್‌ ಅವರನ್ನು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ವೇಳೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್‌ ಕರೆತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನಾಯಕ ಫಾಫ್‌ ಡು ಪ್ಲೆಸಿ ತಿಳಿಸಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ತಂಡದ ಮುಖ್ಯಕೋಚ್‌ ಆಗಿರುವ ಮಾರ್ಕ್‌ ಬೌಚರ್‌, ‘ವಿಲಿಯರ್ಸ್‌ ಅವರನ್ನು ತಂಡಕ್ಕೆ ವಾಪಸ್‌ ಕರೆತರುವ ಸಾಧ್ಯತೆಗಳಿವೆ’ ಎಂದಿಂದ್ದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಪ್ಲೆಸಿ,‘ಈ ಸಂಬಂಧ ಎರಡು–ಮೂರು ತಿಂಗಳ ಹಿಂದೆಯೇ ಮಾತುಕತೆ ನಡೆದಿದೆ’ ಎಂದಿದ್ದಾರೆ.

ಎಂಝಾನ್ಸಿ ಕ್ರಿಕೆಟ್ ಲೀಗ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಪ್ಲೆಸಿ ನಾಯಕತ್ವದ ಪಾರ್ಲ್‌ ರಾಕ್ಸ್‌ ತಂಡ, ಬೌಚರ್‌ ತರಬೇತುದಾರರಾಗಿರುವ ಸ್ವಾನೆ ಸ್ಪಾರ್ಟನ್ಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ಪ್ಲೆಸಿ, ‘ಟಿ20 ವಿಶ್ವಕಪ್‌ಗೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಹಾಗಾಗಿ ಈ ಸಂಬಂಧ ಈಗಾಗಲೇ ಮಾತುಕತೆಗಳು ನಡೆದಿವೆ. ಅವರು ವಿಶ್ವಕಪ್‌ ಒಳಗಾಗಿ ತಂಡ ಕೂಡಿಕೊಳ್ಳಲಿದ್ದಾರೆ’ ಎಂದಿದ್ದಾರೆ.ಡಿ.26 ರಿಂದ ದ.ಆಫ್ರಿಕಾ–ಇಂಗ್ಲೆಂಡ್‌ ಟೆಸ್ಟ್ ಸರಣಿಆರಂಭವಾಗಲಿದ್ದು, ಅದಕ್ಕಾಗಿ ತಕ್ಷಣ ಸಿದ್ಧತೆ ನಡೆಸಬೇಕಿದೆ ಎಂದೂ ಹೇಳಿದ್ದಾರೆ.

ಪ್ಲೆಸಿ ಪಡೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ನಂತರ ಫೆಬ್ರವರಿ 12–26ರ ನಡುವೆ ಆಸ್ಟ್ರೇಲಿಯಾ ವಿರುದ್ಧವೂ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಆಫ್ರಿಕಾ ಕ್ರಿಕೆಟ್‌ನಲ್ಲಿ ಕಳೆದವಾರ ನಾಟಕೀಯ ಬೆಳವಣಿಗಳಾದವು. ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ತಂಡದ ತಾತ್ಕಾಲಿಕ ನಿರ್ದೇಶಕರಾಗಿ ಮತ್ತು ಮಾಜಿ ವಿಕೆಟ್‌ಕೀಪರ್‌ ಮಾರ್ಕ್‌ ಬೌಚರ್‌ ಮುಖ್ಯ ಕೋಚ್‌ ಆಗಿ ನೇಮಕವಾದರು. ಈ ಬೆಳವಣಿಗೆಯನ್ನು ಸ್ವಾಗತಿಸಿರುವಪ್ಲೆಸಿ,‘ಕಳೆದವಾರದ ಕತ್ತಲು ಕಳೆದು ಈಗ ಬೆಳಕು ಮೂಡಿದೆ’ ಎಂದು ಬಣ್ಣಿಸಿದ್ದಾರೆ.

‘ಇದು (ಸ್ಮಿತ್‌–ಬೌಚರ್‌ ನೇಮಕ) ತುಂಬಾ ಮುಖ್ಯ. ಡ್ರೆಸ್ಸಿಂಗ್‌ ಕೋಣೆಯ ವಾತಾವರಣ ಸುಧಾರಿಸಲು ಮತ್ತು ತಂಡಕ್ಕೆ ಜನರಿಂದ ಹೆಚ್ಚಿನ ಬೆಂಬಲ ತಂಡುಕೊಡಲು ಇದರಿಂದ ಸಾಧ್ಯವಾಗಲಿದೆ. ತಂಡದಿಂದ ಉತ್ತಮ ಪ್ರದರ್ಶನ ಮೂಡಿಬರುವುದನ್ನು ಎಲ್ಲರೂ ಬಯಸುತ್ತಾರೆ. ಹಾಗೆಯೇ ಸರಿಯಾದ ವ್ಯಕ್ತಿಗಳು ಸರಿಯಾದ ಸ್ಥಾನದಲ್ಲಿರುವುದನ್ನೂ ಬಯಸುತ್ತಾರೆ. ನಾನು ಹೊಸದಾಗಿ ಪಯಣ ಆರಂಭಿಸಲು ತುಂಬಾ ಕಾತರನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಆಫ್ರಿಕಾ ಪರ 114 ಟೆಸ್ಟ್‌, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿರುವವಿಲಿಯರ್ಸ್‌, 2017ರಲ್ಲಿ ನಿವೃತ್ತಿ ಘೋಷಿಸಿದ್ದರು. ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುವ ಅವರು ಇದೀಗಚುಟುಕು ಕ್ರಿಕೆಟ್‌ ವಿಶ್ವಕಪ್‌ ಒಳಗಾಗಿ ತಂಡ ಸೇರಿಕೊಳ್ಳುವ ಹಾದಿಯಲ್ಲಿದ್ದಾರೆ.

ಈ ಹಿಂದೆ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದವಿಲಿಯರ್ಸ್‌, 2019ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ನಿರ್ಧರಿಸಿದ್ದರು. ಆದರೆ, ವಿಲಿಯರ್ಸ್‌ ಪ್ರಸ್ತಾಪವನ್ನುಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.