ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ತನ್ನ ತವರಿನಲ್ಲಿ ಟೆಸ್ಟ್ ಪಂದ್ಯಗಳನ್ನು ಸೋಲುವ ರೂಢಿ ಇರಲಿಲ್ಲ. ಆದರೆ ನ್ಯೂಜಿಲೆಂಡ್ ತಂಡವು ಬೆಂಗಳೂರಿನಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಿತು. ಆತಿಥೇಯ ಬಳಗಕ್ಕೆ ಒಟ್ಟಾರೆ 57ನೇ ಟೆಸ್ಟ್ ಸೋಲು ಕಾಡಿತು.
ಹಾಗೆಯೇ ಭಾರತ ತಂಡಕ್ಕೆ ಸ್ವದೇಶದಲ್ಲಿ 12 ವರ್ಷಗಳಿಂದ ಟೆಸ್ಟ್ ಸರಣಿ ಸೋತು ಗೊತ್ತೇ ಇರಲಿಲ್ಲ. ಸತತ 18 ಸರಣಿಗಳನ್ನು ಜಯಿಸಿದ್ದ ತಂಡದ ಓಟಕ್ಕೂ ಕಿವೀಸ್ ಕಡಿವಾಣ ಹಾಕಿತು. ಈ ಹಿಂದೆ ಸರಣಿಗಳಲ್ಲಿ ತಂಡವು ಕ್ಲೀನ್‌ಸ್ವೀಪ್ ಸೋಲುಂಡ ರೂಢಿಯೂ ಇಲ್ಲ. ಈ ಬಾರಿ ಅದನ್ನೂ ತೋರಿಸಿ ಹೋಗುವ ಛಲದಲ್ಲಿ ಟಾಮ್ ಲೇಥಮ್ ಬಳಗವಿದೆ. ಭಾರತವು ಒಂದು ಬಾರಿ ಮಾತ್ರ ಸರಣಿಯೊಂದರ ಎಲ್ಲ ಪಂದ್ಯಗಳನ್ನು ಸೋತ ಉದಾಹರಣೆ ಇದೆ. 1999–2000ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಸರಣಿಯ ಎರಡೂ ಪಂದ್ಯಗಳನ್ನು ಗೆದ್ದಿತ್ತು.
ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸರಣಿಯ ಕೊನೆಯ ಮತ್ತು ಮೂರನೇ ಟೆಸ್ಟ್‌ನಲ್ಲಿ ಮೂಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದು ಕ್ಲೀನ್‌ಸ್ವೀಪ್ ತಪ್ಪಿಸಿಕೊಳ್ಳುವ ಒತ್ತಡದಲ್ಲಿ ಆತಿಥೇಯ ಬಳಗವಿದೆ. ಭಾರತವು ಈ ಹಿಂದಿನ ಪಂದ್ಯಗಳಲ್ಲಿ ಆದಂತೆ ಅವಧಿಯಿಂದ, ಅವಧಿಗೆ ಕುಸಿಯುತ್ತ ಹೋದರೆ 0–3ರ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ. ಆದರೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಟ ಮಾಡಿದರೆ ಸೋಲು ತಪ್ಪಿಸಿಕೊಳ್ಳಲು ಅವಕಾಶವಿದೆ.
ಕಿವೀಸ್ ಪಡೆಯು ಭಾರತಕ್ಕೆ ಬಂದಿಳಿಯುವ ಮುನ್ನ ಯಾರೂ ಇಂತಹ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಎರಡು ಗೆಲುವುಗಳೊಂದಿಗೆ ಈಗ ಪ್ರವಾಸಿ ತಂಡವು ಆತ್ಮವಿಶ್ವಾಸದ ಉತ್ತುಂಗದಲ್ಲಿದೆ. ಇಂತಹ ಪರಿಸ್ಥಿತಿಯನ್ನು ರೋಹಿತ್ ಬಳಗವು ಈ ಹಿಂದೆ ಎಂದೂ ಎದುರಿಸಿಲ್ಲ. ಅದರಿಂದಾಗಿ ಈ ಸೋಲಿನಿಂದ ಮೈಮನ ಮುದುಡಿಕೊಂಡರೆ ಹಿನ್ನಡೆಯ ಅಪಾಯವಿದೆ. ಈ ನಕಾರಾತ್ಮಕ ಸಮಯವನ್ನು ಮೆಟ್ಟಿ ನಿಲ್ಲುವ ಅಗತ್ಯ ಈಗ ಇದೆ.
ಪ್ರವಾಸಿ ತಂಡಗಳು ಭಾರತಕ್ಕೆ ಆಗಮಿಸುವಾಗ ಇಲ್ಲಿ ಗೆಲ್ಲುವುದು ಕಷ್ಟ ಎಂಬ ಯೋಚನೆಗಳೊಂದಿಗೆ ಬರುವುದೇ ಹೆಚ್ಚು. ಆದ್ದರಿಂದ ಭಾರತ ಪ್ರವಾಸವೊಂದು ಅನುಭವ ಮತ್ತು ಪಾಠ ಎಂದುಕೊಳ್ಳುತ್ತಾರೆ. ಆದರೆ ಈ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು ಈಗಿನ ಭಾರತ ತಂಡಕ್ಕೆ ಬೇರೆ ರೀತಿಯ ಪಾಠ ಕಲಿಸಿದೆ. ಟೆಸ್ಟ್ ಪಂದ್ಯ ಜಯಿಸುವ ಮಾಸ್ಟರ್‌ಕ್ಲಾಸ್ ತೋರಿಸಿಕೊಟ್ಟಿದ್ದಾರೆ.
ಭಾರತದಂತೆಯೇ ಅವರೂ ಕೂಡ ಆಕ್ರಮಣಶೀಲ ಕ್ರಿಕೆಟ್ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಆತಿಥೇಯ ತಂಡವು ಆಕ್ರಮಣಶೈಲಿಯನ್ನು ಬಿಳಿ ಚೆಂಡಿನ ಶೈಲಿಯೇ ಎಂಬ ಗೊಂದಲದಲ್ಲಿದೆ. ಇದರಿಂದಾಗಿ ಬ್ಯಾಟರ್‌ಗಳು ಸರಣಿಯುದ್ದಕ್ಕೂ ನಿರಾಶೆ ಮೂಡಿಸಿದರು. ಬೌಲರ್‌ಗಳು ದಣಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಾರಿಕೆಯಲ್ಲಿ ಈ ರೀತಿಯ ಯೋಜನೆ ಖಂಡಿತವಾಗಿಯೂ ಇರುವುದಿಲ್ಲ. ತಂಡವು ಸಂಕ್ರಮಣ ಕಾಲದಲ್ಲಿ ಹಾದು ಹೋಗುತ್ತಿರುವುದರಿಂದ ಇಂತಹ ಏರುಪೇರುಗಳು ಕಂಡು ಬರುತ್ತಿರುವುದು ಸುಳ್ಳಲ್ಲ.
ಈ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು, ಕಣಕ್ಕಿಳಿಯುವ ಸವಾಲು ರೋಹಿತ್ ಪಡೆಯ ಮುಂದಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿಶ್ವಾಸ ಹೆಚ್ಚಿಸುವ ಒಂದು ಗೆಲುವಿನ ಅವಶ್ಯಕತೆ ತಂಡಕ್ಕೂ ಇದೆ.
ಪಂದ್ಯ ಆರಂಭ: ಬೆಳಿಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್
ಸೋಲುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು: ಗೌತಮ್
ಮುಂಬೈ: ರಾಹುಲ್ ದ್ರಾವಿಡ್ ಅವರ ನಂತರ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕವಾಗಿರುವ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ತಂಡವು ಆಡುತ್ತಿರುವ ಮೂರನೇ ಅಂತರರಾಷ್ಟ್ರೀಯ ಸರಣಿ ಇದು. ಶ್ರೀಲಂಕಾ ಎದುರು ಏಕದಿನ ಸರಣಿಯಲ್ಲಿ ಸೋತಿತ್ತು. 1997ರ ನಂತರ ಲಂಕಾ ಎದುರು ಭಾರತ ತಂಡವು ಇಂತಹ ನಿರಾಶೆ ಅನುಭವಿಸಿದ್ದು ಇದೇ ಮೊದಲು. ಬಾಂಗ್ಲಾ ಎದುರು ಸರಣಿ ಗೆದ್ದಿತ್ತು. ಆದರೆ ಈಗ ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಸರಣಿಯನ್ನು 2–0ಯಿಂದ ಕೈಚೆಲ್ಲಿದೆ. ಗೌತಮ್ ಅವರಿಗೆ ಈ ಹುದ್ದೆಗೆ ಬರುವಾಗ ಭಾರತ ತಂಡದ ಕೋಚಿಂಗ್ ಸುಲಭವಲ್ಲ ಎಂಬುದರ ಅರಿವಿತ್ತು. ಆದರೆ ಇಷ್ಟೊಂದು ಕೆಟ್ಟ ಪರಿಸ್ಥಿತಿ ಬರುವ ನಿರೀಕ್ಷೆ ಅವರಿಗೆ ಬಹುಶಃ ಇರಲಿಲ್ಲ. ಭಾರತ ತಂಡವು ಈಗ ಕ್ಲೀನ್‌ಸ್ವೀಪ್ ಸೋಲನುಭವಿಸುವ ಆತಂಕದಲ್ಲಿದೆ. ‘ಸುಲಭವಾದ ಕೆಲಸ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಶ್ರೀಲಂಕಾ ಎದುರು ಸೋತೆವು. ನ್ಯೂಜಿಲೆಂಡ್ ಎದುರು ತವರಿನಲ್ಲಿಯೇ ಸರಣಿ ಸೋತಿದ್ದೇವೆ. ಈ ಸೋಲುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು’ ಎಂದು ಗಂಭೀರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ನಮಗೆ ನಿರೀಕ್ಷಿತ ಫಲಿತಾಂಶ ಬರದ ಸಂದರ್ಭದಲ್ಲಿ ಟೀಕೆಗಳು ಬರುವುದು ಸಹಜ. ಆದರೆ ಇಲ್ಲಿ ನಾನು ಇದಕ್ಕೆ ಬ್ಯಾಟರ್‌ಗಳ ಅಥವಾ ಬೌಲರ್‌ಗಳ ವೈಫಲ್ಯ ಎಂದು ಪ್ರತ್ಯೇಕವಾಗಿ ಹೇಳುವುದಿಲ್ಲ. ಇದು ತಂಡದ ಆಟ. ಎಲ್ಲವೂ ಒಂದಾಗಿ ಉತ್ತಮ ಪ್ರಯೋಗ ನಡೆದಾಗಲಷ್ಟೇ ಫಲಿತಾಂಶ ಸಾಧ್ಯ’ ಎಂದರು. ‘ಸೋಲನ್ನು ಮರೆಮಾಚುವ ಪ್ರಯತ್ನವನ್ನು ನಾನು ಮಾಡುವುದಿಲ್ಲ. ಇದು ಬಹಳ ನೋವಿನ ಸಂಗತಿ. ಸೋಲು ಯಾತನೆ ನೀಡಬೇಕು. ಮನೆಯಂಗಳದಲ್ಲಿ ಸೋಲುವುದು ಸಣ್ಣ ನೋವಲ್ಲ. ಆದರೆ ಅದನ್ನು ಸಹಿಸಿಕೊಳ್ಳಬೇಕು. ಅದರಿಂದ ಹೊರಬರಲು ಪ್ರಯತ್ನಿಸಬೇಕು. ಆಗಲೇ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.