ADVERTISEMENT

ಈ ವಿಶ್ವಕಪ್ ಜಯ ವಿಶೇಷವಾದದ್ದು: ರೋಹಿತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:00 IST
Last Updated 5 ಜುಲೈ 2024, 16:00 IST
ಮುಂಬೈನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಗೌರವಿಸಿದರು  –ಪಿಟಿಐ ಚಿತ್ರ
ಮುಂಬೈನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಗೌರವಿಸಿದರು  –ಪಿಟಿಐ ಚಿತ್ರ   

ಮುಂಬೈ: 'ಈ ವಿಶ್ವಕಪ್ ಗೆಲುವು ನಮಗಷ್ಟೇ ಅಲ್ಲ. ಇಡೀ ದೇಶಕ್ಕೆ ಬಹಳ ಮಹತ್ವದ್ದು ಎಂಬುದು ಜನರು ತೋರಿಸಿದ ಅಪರಿಮಿತ ಪ್ರೀತಿಯಿಂದ ಗೊತ್ತಾಗುತ್ತಿದೆ. ಇದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಅವರಿಗಾಗಿ ಇಂತಹದೊಂದು ಸಾಧನೆಯನ್ನು ನಾವು ಮಾಡಿದ್ದೆವೆಂಬ ಸಾರ್ಥಕ ಭಾವ ಮೂಡಿದೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 

ಬಾರ್ಬಾಡೋಸ್‌ನಲ್ಲಿ ಟಿ20 ವಿಶ್ವಕಪ್ ಜಯಿಸಿ ಐದು ದಿನಗಳ ನಂತರ ಗುರುವಾರ ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ಅಭೂತಪೂರ್ವ ಸ್ವಾಗತ ದೊರೆಯಿತು. ನರೀಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೂ ನಡೆದ ವಿಜಯಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ವಿಶ್ವಕಪ್ ವಿಜೇತ ಆಟಗಾರರ ಮೇಲೆ ಪ್ರೀತಿಯ ಮಳೆಗರೆದರು. ‘ರೋಹಿತ್.. ರೋಹಿತ್..’ ಎಂಬ ಜಯಘೋಷಗಳು ಮೊಳಗಿದ್ದವು. 

ಈ ಬಗ್ಗೆ ಬಿಸಿಸಿಐ ಡಾಟ್‌ ಟಿವಿ ಜೊತೆ ಮಾತನಾಡಿದ ರೋಹಿತ್, ‘2007ರಲ್ಲಿ ಟಿ20 ವಿಶ್ವಕಪ್ ಜಯಿಸಿದಾಗಲೂ ಇದೇ ರೀತಿ ಸಂಭ್ರಮ ಇತ್ತು. ಆದರೆ ಆಗ ಮಧ್ಯಾಹ್ನವೇ ಯಾತ್ರೆ ಆರಂಭವಾಗಿತ್ತು. ಅದು ನನಗೆ ಮೊದಲ ವಿಶ್ವಕಪ್ ಜಯದ ಪುಳಕವಾಗಿತ್ತು. ಈ ಬಾರಿಯದ್ದು ಸ್ವಲ್ಪ ವಿಶೇಷವಾಗಿದೆ. ಏಕೆಂದರೆ,  ನಾನು ತಂಡವನ್ನು ನಾಯಕನಾಗಿ ಮುನ್ನಡೆಸಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು. 

ADVERTISEMENT

ಮಹಾರಾಷ್ಟ್ರ ಸರ್ಕಾರದಿಂದ ₹ 11 ಕೋಟಿ

ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು  ಅಲ್‌ರೌಂಡರ್ ಶಿವಂ ದುಬೆ ಅವರನ್ನು ಮಹಾರಾಷ್ಟ್ರ ಸರ್ಕಾರವು ಶುಕ್ರವಾರ ಸಂಜೆ ವಿಧಾನಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಭಾರತ ತಂಡಕ್ಕೆ ₹ 11 ಕೋಟಿ ಬಹುಮಾನವನ್ನು ರಾಜ್ಯ ಸರ್ಕಾರ ಘೋಷಿಸಿತು.

ಮುಖ್ಯ ಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡಣವೀಸ್ ಅವರು ಹಾಜರಿದ್ದರು. 

ಪೋಲಿಸರಿಗೆ ವಿರಾಟ್ ಕೃತಜ್ಞತೆ

ಮುಂಬೈನಲ್ಲಿ ನಡೆದ ವಿಜಯಯಾತ್ರೆಯ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯು  ಅಚ್ಚುಕಟ್ಟಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಿದ ಪೊಲೀಸ್ ಇಲಾಖೆಯು ಅದ್ಭುತವಾದ ಕಾರ್ಯ ಮಾಡಿದೆ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಕೃತಜ್ಞತೆ ಸಲ್ಲಿಸಿದ್ದಾರೆ.

‘ಮುಂಬೈ ಪೊಲೀಸ್‌ ಇಲಾಖೆಗೆ ಹೃದಯಪೂರ್ವಕ ಕೃತಜ್ಞತೆಗಳು. ಭಾರತ ತಂಡದ ವಿಜಯಯಾತ್ರೆಯು ಶಿಸ್ತುಬದ್ಧವಾಗಿ ನಡೆಯುವಂತಾಗಲು ಪೊಲೀಸರ ಸಮರ್ಪಣಾ ಭಾವದ ಕರ್ತವ್ಯ ನಿರ್ವಹಣೆ ಕಾರಣವಾಯಿತು. ಅವರ ಸೇವೆಗೆ ನಾವು ಋಣಿಯಾಗಿದ್ದೇವೆ’ ಎಂದು 35 ವರ್ಷದ ವಿರಾಟ್ ಅವರು ‘ಎಕ್ಸ್‌’ ನಲ್ಲಿ ಬರೆದಿದ್ದಾರೆ.  

ಆಲ್‌ರೌಂಡರ್ ರವೀಂದ್ರ ಜಡೇಜ ಅವರೂ ಎಕ್ಸ್‌ ಖಾತೆಯಲ್ಲಿ ಇದೇ ರೀತಿಯ ಸಂದೇಶ ಹಾಕಿದ್ದಾರೆ.

‘ಮುಂಬೈ ಪೊಲೀಸರಿಗೆ ಅಪಾರ ಕೃತಜ್ಞತೆಗಳು. ಕಳೆದ ರಾತ್ರಿ  ಅಮೋಘವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಜಡೇಜ ಬರೆದಿದ್ಧಾರೆ.

ವಿಶ್ವಕಪ್ ಫೈನಲ್‌ ಮುಂಬೈನಲ್ಲಿರಲಿ: ಬಿಸಿಸಿಐಗೆ ಠಾಕ್ರೆ ಚಾಟಿ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶ್ವಕಪ್ ಟೂರ್ನಿಗಳು ಭಾರತದಲ್ಲಿ ನಡೆದಾಗ ಫೈನಲ್‌ ಪಂದ್ಯಗಳು ಮುಂಬೈನಿಂದ ಹೊರಹೋಗದಿರಲಿ ಎಂದು ಶಿವಸೇನಾ ಪಕ್ಷದ ನಾಯಕ ಆದಿತ್ಯ ಠಾಕ್ರೆ ಬಿಸಿಸಿಐ ವಿರುದ್ಧ ಚಾಟಿ ಬೀಸಿದ್ದಾರೆ.  ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಅಹಮದಾಬಾದಿನಲ್ಲಿ ನಡೆಸಲಾಗಿತ್ತು. ಭಾರತ ತಂಡವು ಆ ಪಂದ್ಯದಲ್ಲಿ ಸೋತಿತ್ತು. ಆಗ ಪಂದ್ಯ ಆಯೋಜಿಸಿದ ಸ್ಥಳದ ಕುರಿತು ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು.  ‘ನಿನ್ನೆ (ಗುರುವಾರ) ನಡೆದಿದ್ದ ವಿಶ್ವಕಪ್ ವಿಜಯಯಾತ್ರೆಯು ಮುಂಬೈ ಕ್ರಿಕೆಟ್‌ ಪ್ರೀತಿಯನ್ನು ಎತ್ತಿತೋರಿಸಿದೆ. ಇದು ಬಿಸಿಸಿಐಗೆ ಸ್ಪಷ್ಟ ಸಂದೇಶವೂ ಇದಾಗಿದೆ. ಇನ್ನು ಮುಂದಾದರೂ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಫೈನಲ್‌ ಮುಂಬೈನಲ್ಲಿಯೇ ನಡೆಯಬೇಕು’ ಎಂದು ಅವರು ‘ಎಕ್ಸ್‌‘ನಲ್ಲಿ ಸಂದೇಶ ಹಾಕಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.