ದುಬೈ: ಬುಧವಾರ ರಾತ್ರಿ ಶಾರ್ಜಾದಲ್ಲಿ ನಡೆದ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದ ಬಳಿಕ ಅಭಿಮಾನಿಗಳ ಘರ್ಷಣೆ ಜರುಗಿತು.
ಅಫ್ಗನ್ ತಂಡದ ಅಭಿಮಾನಿಗಳು ಕುರ್ಚಿಗಳನ್ನು ಮುರಿದು ಪಾಕಿಸ್ತಾನ ಬೆಂಬಲಿಗರ ಕಡೆಗೆ ಬೀಸಿ ಎಸೆದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಈ ಘಟನೆಯನ್ನು ಖಂಡಿಸಿರುವ ಪಾಕ್ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್, ‘ಅಫ್ಗಾನಿಸ್ತಾನದ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ನೋಡಿ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಮಾಡಿದ್ದನ್ನೇ ಈಗಲೂ ಮಾಡುತ್ತಿದ್ದಾರೆ. ಇಂದೊಂದು ಕ್ರಿಕೆಟ್ ಪಂದ್ಯ, ಕ್ರೀಡಾಸ್ಫೂರ್ತಿಯಿಂದ ನಡೆದುಕೊಳ್ಳಬೇಕಿತ್ತು’ ಎಂದು ವಿಡಿಯೊ ಸಮೇತ ಟ್ವೀಟ್ ಮಾಡಿದ್ದಾರೆ. ಅದನ್ನು ಅಫ್ಗನ್ ಕ್ರಿಕೆಟ್ ಮಂಡಳಿ ಮಾಜಿ ಸಿ.ಇ.ಒ ಶಫೀಕ್ಸ್ಥಾನಿಕ್‌ಝಾಯ್ ಅವರಿಗೆ ಟ್ಯಾಗ್ ಮಾಡಿದ್ಧಾರೆ.
ಅಖ್ತರ್ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶಫೀಕ್, ‘ಅಭಿಮಾನಿಗಳ ಭಾವನೆಗಳನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ಘಟನೆಯ ಬಗ್ಗೆ ಮಾತನಾಡುವಾಗ ಇಡೀ ರಾಷ್ಟ್ರವನ್ನು ತರಬಾರದು. ಇಂತಹ ಹಲವು ಘಟನೆಗಳು ಕ್ರಿಕೆಟ್‌ನಲ್ಲಿ ಈ ಹಿಂದೆಯೂ ನಡೆದಿವೆ, ನೀವು ಕಬೀರ್ ಖಾನ್, ಇಂಜಮಾಮ್ ಭಾಯ್ ಮತ್ತು ರಶೀದ್ ಲತೀಫ್ ಅವರನ್ನು ಕೇಳಿ. ಮುಂದಿನ ಬಾರಿ ಇಂತಹ ವಿಷಯಗಳಿಗೆ ದೇಶವನ್ನು ಎಳೆದುತರಬೇಡಿ’ ಎಂದಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಗನ್ ತಂಡವು, 129 ರನ್ ಕಲೆ ಹಾಕಿತ್ತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನ 19ನೇ ಓವರ್ ಬಳಿಕ 9 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತ್ತು. ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ನಸೀಮ್ ಶಾ ಪಾಕಿಸ್ತಾನಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು.
ಆಸಿಫ್–ಶಫೀಕ್ ಜಟಾಪಟಿ: ಪಂದ್ಯದ ಕೊನೆಯ ಹಂತದಲ್ಲಿ ಪಾಕಿಸ್ತಾನದ ವಿಕೆಟ್‌ಗಳು ಪಟಪಟನೆ ಉರುಳಿದವು. ಇದರಿಂದಾಗಿ ರೋಚಕ ಘಟ್ಟ ತಲುಪಿತ್ತು. ಈ ಸಂದರ್ಭದಲ್ಲಿ ಪಾಕ್ ತಂಡದ ಬ್ಯಾಟರ್ ಆಸಿಫ್ ಅಲಿ ವಿಕೆಟ್ ಪಡೆದ ಶಫೀಕ್ ಸಂಭ್ರಮಿಸಿದರು. ಆಗ ಆಸಿಫ್ ಮತ್ತು ಶಫೀಕ್ ನಡುವೆ ಮಾತಿನ ಚಕಮಕಿ ನಡೆಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಅಫ್ಗನ್ ನಾಯಕ ನಬಿ ಹಾಗೂ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.