ADVERTISEMENT

ಭಾರತ–ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಜೂಲನ್ ಬೀಳ್ಕೊಡುಗೆಗೆ ಲಾರ್ಡ್ಸ್‌ ಸಜ್ಜು

ಕ್ಲೀನ್‌ಸ್ವೀಪ್ ಮೇಲೆ ಹರ್ಮನ್‌ಪ್ರೀತ್ ಕಣ್ಣು

ಪಿಟಿಐ
Published 24 ಸೆಪ್ಟೆಂಬರ್ 2022, 6:15 IST
Last Updated 24 ಸೆಪ್ಟೆಂಬರ್ 2022, 6:15 IST
ಜೂಲನ್ ಗೋಸ್ವಾಮಿ
ಜೂಲನ್ ಗೋಸ್ವಾಮಿ   

ಲಂಡನ್: ಮಹಿಳಾ ಕ್ರಿಕೆಟ್‌ ಅಂಗಳದಲ್ಲಿ ‘ವೇಗದ ಬೌಲರ್’ ಎಂಬ ಪದಕ್ಕೆ ಮತ್ತೊಂದು ಹೆಸರೆಂದರೆ ಜೂಲನ್ ಗೋಸ್ವಾಮಿ. ಪಶ್ಚಿಮ ಬಂಗಾಳದ ಚಕ್ಡಾ ಗ್ರಾಮದ ಪ್ರತಿಭೆ ಕ್ರಿಕೆಟ್‌ ರಂಗದಲ್ಲಿ ದಂತಕಥೆಯಾಗಿ ಬೆಳೆದ ಕತೆಯೇ ರೋಮಾಂಚನ ಮೂಡಿಸುತ್ತದೆ.

ಇದೀಗ ಜೂಲನ್ ತಮ್ಮ ವೃತ್ತಿ ಜೀವನದ ಕೊನೆಯ ಹಂತಕ್ಕೆ ಬಂದು ನಿಂತಿದ್ದಾರೆ. ಶನಿವಾರ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ನಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಲಿದ್ಧಾರೆ. ಮೂರು ಪಂದ್ಯಗಳ ಸರಣಿಯಲ್ಲಿ 2–0ಯಿಂದ ಜಯಿಸಿರುವ ಭಾರತ ತಂಡವು ಇನ್ನೊಂದು ಪಂದ್ಯ ಗೆದ್ದು ಕ್ಲೀನ್‌ಸ್ವೀಪ್ ಸಾಧನೆಯೊಂದಿಗೆ ಜೂಲನ್‌ಗೆ ಬೀಳ್ಕೊಡುಗೆ ನೀಡುವ ಛಲದಲ್ಲಿದೆ.

5.11 ಅಡಿ ಎತ್ತರದ ಜೂಲನ್ಅವರ ಸಾಧನೆಗಳು ಮುಗಿಲೆತ್ತರ.39 ವರ್ಷದ ಬಲಗೈ ಮಧ್ಯಮವೇಗಿ ಜೂಲನ್ ಖಾತೆಯಲ್ಲಿ ವಿಶ್ವದಾಖಲೆಗಳು ತುಂಬಿವೆ. ಎರಡು ದಶಕಗಳ ಅವರ ವೃತ್ತಿಜೀವನದಲ್ಲಿ ಮಹಿಳಾ ಕ್ರಿಕೆಟ್‌ನ ಎಲ್ಲ ದೇಶಗಳ ತಂಡದ ಶ್ರೇಷ್ಠ ಬ್ಯಾಟರ್‌ಗಳ ವಿಕೆಟ್‌ಗಳನ್ನು ಗಳಿಸಿದ ಶ್ರೇಯ ಅವರದ್ದು.

ADVERTISEMENT

ಅವರ ಸಾಧನೆಗೆ ತಕ್ಕಂತೆ ಗೌರವಯುತ ವಿದಾಯವೂ ಲಭಿಸಲಿದೆ. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿ ನಿರ್ಗಮಿಸುವ ಅಪೂರ್ವ ಅವಕಾಶ ಅವರದ್ದಾಗಿದೆ. ಕ್ರಿಕೆಟ್‌ ದಿಗ್ಗಜರಾದ ಸುನೀಲ್ ಗಾವಸ್ಕರ್, ಬ್ರಯನ್ ಲಾರಾ, ಮಿಥಾಲಿ ರಾಜ್ ಅವರಿಗೂ ಲಾರ್ಡ್ಸ್‌ನಲ್ಲಿ ತಮ್ಮ ಕೊನೆಯ ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.

ಅಲ್ಲದೇ ಎರಡು ದಶಕಗಳ ನಂತರ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಜಯಿಸಿದ ಶ್ರೇಯವೂ ಭಾರತಕ್ಕೆ ಒಲಿದಿದೆ. ಜೂಲನ್ ಅವರ ಸಾಧನೆಯಿಂದಾಗಿ ಹತ್ತಾರು ಆಟಗಾರ್ತಿಯರು ವೇಗದ ಬೌಲಿಂಗ್ ಮಾಡುವ ಆಸಕ್ತಿ ತಳೆದಿದ್ದು ಸುಳ್ಳಲ್ಲ. ಸದ್ಯ ತಂಡದಲ್ಲಿರುವ ಮೇಘನಾ ಸಿಂಗ್, ರೇಣುಕಾ ಠಾಕೂರ್ ಮತ್ತು ಪೂಜಾ ವಸ್ತ್ರಕರ್ ಅವರು ತಲುಪಬೇಕಾದ ‘ಮೈಲುಗಲ್ಲು’ ಜೂಲನ್ ಅವರೇ ಆಗಿದ್ದಾರೆ.

ಅವರಿಗೆ ಶನಿವಾರ ತಂಡದ ಆಟಗಾರ್ತಿಯರು ‘ಗಾರ್ಡ್ ಆಫ್ ಆನರ್’ ನೀಡಲಿದ್ದಾರೆ. ಕೊನೆಯ ಬಾರಿಗೆ ಜೂಲನ್ ಅವರ ಸ್ವಿಂಗ್‌ ಎಸೆತಗಳಲಾಸ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಸಬಿನೆನಿ ಮೇಘನಾ, ದೀಪ್ತಿ ಶರ್ಮಾ, ಯಷ್ಟಿಕಾ ಭಾಟಿಯಾ (ವಿಕೆಟ್‌ಕೀಪರ್), ಪೂಜಾ ವಸ್ತ್ರಕರ್, ಸ್ನೇಹಾ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಜೇಶ್ವರಿ ಗಾಯಕವಾಡ, ಹರ್ಲಿನ್ ಡಿಯೊಲ್, ದಯಾಳನ್ ಹೇಮಲತಾ, ಸಿಮ್ರನ್ ದಿಲ್ ಬಹಾದ್ದೂರ್, ಜೂಲನ್ ಗೋಸ್ವಾಮಿ, ತಾನಿಯಾ ಭಾಟಿಯಾ, ಜೆಮಿಮಾ ರಾಡ್ರಿಗಸ್

ಇಂಗ್ಲೆಂಡ್: ಎಮಿ ಜೋನ್ಸ್ (ನಾಯಕಿ/ವಿಕೆಟ್‌ಕೀಪರ್), ಟ್ಯಾಮಿ ಬೆಮೌಂಟ್, ಲಾರೆನ್ ಬೆಲ್, ಮೇಯಾ ಬೌಷಿರ್, ಅಲೈಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಫ್ರೆಯಾ ಡೇವಿಸ್, ಅಲೈಸ್ ಡೇವಿಡ್ಸ್‌ನ್ –ರಿಚರ್ಡ್ಸ್, ಚಾರ್ರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟೊನ್, ಫ್ರೆಯಾ ಕೆಂಪ್, ಐಸಿ ವಾಂಗ್, ಡ್ಯಾನಿಲ್ ವೈಟ್.

ಪಂದ್ಯ ಆರಂಭ: ಮಧ್ಯಾಹ್ನ 3.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.