ನವದೆಹಲಿ: ದೇಶಿಯ ಕ್ರಿಕೆಟ್ ಆಡುವ ವಿಷಯದಲ್ಲಿ ಬದ್ಧತೆ ತೋರದ ಆಟಗಾರರ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೈಗೊಂಡಿರುವ ಕ್ರಮವನ್ನು ಸಮರ್ಥಿಸಿರುವ ಭಾರತದ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್, ‘ಕೆಲವು ಆಟಗಾರರಿಗೆ ಈ ಕ್ರಮದಿಂದ ತೊಂದರೆಯಾಗಬಹುದು. ಆದರೆ ಆಗಲಿ’ ಎಂದು ಹೇಳಿದ್ದಾರೆ.
ರಣಜಿ ಟ್ರೋಫಿಯಂಥ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಗಳ ರಕ್ಷಣೆಯ ಹಿತದೃಷ್ಟಿಯಿಂದ ಬಿಸಿಸಿಐ ಕೈಗೊಂಡ ಕ್ರಮ ಅಗತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ, ಬುಧವಾರ ಪ್ರಕಟಿಸಿದ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿತ್ತು. ರಣಜಿ ತಂಡಕ್ಕೆ ಲಭ್ಯರಿದ್ದರೂ ಆಡದೇ ಇದ್ದುದು ಈ ಕ್ರಮಕ್ಕೆ ಕಾರಣವಾಗಿತ್ತು. ಮಂಡಳಿಯ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೀರ್ತಿ ಆಜಾದ್ ಮತ್ತು ಇರ್ಫಾನ್ ಪಠಾನ್ ಅವರು ಇಬ್ಬರು ಆಟಗಾರರ ಪರ ನಿಂತಿದ್ದರು.
ಕಪಿಲ್ ದೇವ್ ಅವರು ಯಾರ ಹೆಸರನ್ನೂ ಹೇಳಲಿಲ್ಲ. ಆದರೆ ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡಬೇಕೆನ್ನುವ ಬಿಸಿಸಿಣ ನಿರ್ಧಾರ ಈ ಹಿಂದೆಯೇ ಆಗಬೇಕಾಗಿತ್ತು ಎಂದರು.
‘ಹೌದು. ಕೆಲವು ಆಟಗಾರರಿಗೆ ತೊಂದರೆ ಆಗಬಹುದು. ಆದರೆ ಆಗಲಿ. ದೇಶಕ್ಕಿಂತ ದೊಡ್ಡವರು ಯಾರೂ ಇರಲ್ಲ’ ಎಂದು ಕಪಿಲ್ ಹೇಳಿದರು.
‘ದೇಶಿ ಕ್ರಿಕೆಟ್‌ನ ಸ್ಥಾನಮಾನ ರಕ್ಷಣೆಗೆ ಬಿಸಿಸಿಐ ಕೈಗೊಂಡ ಕ್ರಮವನ್ನು ನಾನು ಅಭಿನಂದಿಸುತ್ತೇನೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ನಂತರ ಆಟಗಾರರು ದೇಶಿ ಟೂರ್ನಿಯನ್ನು ತಪ್ಪಿಸಿಕೊಳ್ಳುವ ಕ್ರಮದಿಂದ ನನಗೆ ಬೇಸರವಾಗುತಿತ್ತು’ ಎಂದಿದ್ದಾರೆ 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಕಪಿಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.