ADVERTISEMENT

ಕ್ರಿಕೆಟ್ ಆಟಗಾರರ ಸಂಭಾವನೆ, ಗುತ್ತಿಗೆಯಲ್ಲಿ ಅನ್ಯಾಯ: ಫಿಕಾ ಆರೋಪ

ರಾಯಿಟರ್ಸ್
Published 3 ಆಗಸ್ಟ್ 2020, 12:07 IST
Last Updated 3 ಆಗಸ್ಟ್ 2020, 12:07 IST
ಐಸಿಸಿ
ಐಸಿಸಿ   

ನವದೆಹಲಿ: ಪುರುಷ ಕ್ರಿಕೆಟಿಗರ ಪೈಕಿ ಬಹುತೇಕರಿಗೆ ಸಂಭಾವನೆ ಮತ್ತು ಗುತ್ತಿಗೆ ನವೀಕರಣ ವಿಷಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮತ್ತು ಅದರ ಸದಸ್ಯ ಸಂಸ್ಥೆಗಳಿಂದ ಅನ್ಯಾಯವಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಫೆಡರೇಷನ್ (ಫಿಕಾ) ದೂರಿದ್ದು ಸಮಸ್ಯೆಗೆ ಆದಷ್ಟು ಶಿಘ್ರ ಪರಿಹಾರ ಕಾಣಬೇಕು ಎಂದು ಸೋಮವಾರ ಆಗ್ರಹಿಸಿದೆ.

‘ಪುರುಷರ ಜಾಗತಿಕ ಉದ್ಯೋಗ ವರದಿ–2020‘ ಅನ್ನು ಬಿಡುಗಡೆ ಮಾಡಿ ಈ ವಿಷಯವನ್ನು ಬಹಿರಂಗ ಮಾಡಿರುವ ಫಿಕಾ, ಕ್ರಿಕೆಟಿಗರ ಕ್ಷೇಮವನ್ನು ಕಾಯಲು ಐಸಿಸಿ ಸದಾ ಬದ್ಧವಾಗಿರಬೇಕು ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ ವಕ್ತಾರರು ಆಟಗಾರರ ಫೆಡರೇಷನ್ ವರದಿಯ ಆಧಾರದಲ್ಲಿ ಆರೋಪಗಳನ್ನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಐಸಿಸಿ ಆಯೋಜಿಸಿದ್ದ ಟೂರ್ನಿಯೊಂದರಲ್ಲಿ ಬಾಂಗ್ಲಾದೇಶ ಆಟಗಾರರಿಗೆ ಸಿಗಬೇಕಾಗಿದ್ದ ಬಹುಮಾನ ಮೊತ್ತದ ಪಾಲು ಇನ್ನೂ ಕೈಸೇರಲಿಲ್ಲ. ಜಿಂಬಾಬ್ವೆ ಆಟಗಾರರು ಗುತ್ತಿಗೆ ನವೀಕರಣಕ್ಕಾಗಿ ಅಲ್ಲಿನ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಎದುರು ನೋಡುತ್ತಿದ್ದಾರೆ. ಕೆನಡಾ, ಯುಎಇ ಮತ್ತು ಕತಾರ್‌ನಂಥ ರಾಷ್ಟ್ರಗಳಲ್ಲಿ ನಡೆದಿದ್ದ ಟ್ವೆಂಟಿ–20 ಹಾಗೂ ಟಿ–10 ಟೂರ್ನಿಗಳಲ್ಲಿ ಆಟಗಾರರಿಗೆ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ ಎಂದು ಫಿಕಾ ಮುಖ್ಯ ಕಾರ್ಯನಿರ್ವಾಹಕ ಟಾಮ್ ಮಫತ್ ಹೇಳಿದ್ದಾರೆ.

ADVERTISEMENT

‘ಜಾಗತಿಕ ಮಟ್ಟದಲ್ಲಿ ಫಿಕಾ ಜೊತೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಟಗಾರರ ಸಂಘಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಸಿಸಿ ಮುಂದಾಗಬೇಕು. ಇಲ್ಲವಾದರೆ ಸದ್ಯ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಲಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.