ಪೋರ್ಟ್ ಎಲಿಜಬೆತ್ (ದಕ್ಷಿಣ ಆಫ್ರಿಕಾ): ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 1877ರ ಮಾರ್ಚ್ 15ರಿಂದ 19ರವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿಟೆಸ್ಟ್ ಕ್ರಿಕೆಟ್ ಇತಿಹಾಸದ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದ ಮೂಲಕ ವಿದೇಶದಲ್ಲಿ ಆಡಿದ ಮೊದಲ ತಂಡ ಎನಿಸಿದ್ದ ಆಂಗ್ಲರು,ಬರೋಬ್ಬರಿ 142 ವರ್ಷಗಳ ಬಳಿಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್, ವಿದೇಶಿ ಪಿಚ್‌ಗಳಲ್ಲಿ 500 ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. ಈ ಪಂದ್ಯವು ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯುತ್ತಿದೆ.
ಇಂಗ್ಲೆಂಡ್ ಇದುವರೆಗೆ ವಿದೇಶಗಳಲ್ಲಿ ಆಡಿರುವ 499 ಪಂದ್ಯಗಳಲ್ಲಿ 149 ಗೆಲುವು ಸಾಧಿಸಿದೆ. 182ರಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 83 ಪಂದ್ಯಗಳ ಪೈಕಿ 32 ಗೆಲುವು, 31 ಡ್ರಾ ಸಾಧಿಸಿದ್ದು, ಉಳಿದ 20ರಲ್ಲಿ ಸೋಲು ಕಂಡಿದೆ.
ಒಟ್ಟಾರೆ 1020 ಪಂದ್ಯ ಆಡಿರುವ ಇಂಗ್ಲೆಂಡ್ ಹೆಚ್ಚು ಟೆಸ್ಟ್ ಆಡಿದ ತಂಡ ಎನಿಸಿದೆ. ಇದರಲ್ಲಿ369 ಗೆಲುವು ಮತ್ತು 304 ಸೋಲು ಕಂಡಿದೆ. 347 ಪಂದ್ಯಗಳು ಡ್ರಾ ಆಗಿವೆ. ಹೆಚ್ಚು ಪಂದ್ಯ ಆಡಿರುವ ಎರಡನೇ ತಂಡ ಆಸ್ಟ್ರೇಲಿಯಾ. ಅದು 830 ಪಂದ್ಯಗಳನ್ನು ಆಡಿದೆ. 545 ಹಾಗೂ 540 ಟೆಸ್ಟ್ ಆಡಿರುವ ವೆಸ್ಟ್ ಇಂಡೀಸ್ ಮತ್ತು ಭಾರತಕ್ರಮವಾಗಿ ಮೂರು, ನಾಲ್ಕನೇ ಸ್ಥಾನಗಳಲ್ಲಿವೆ.
ಸದ್ಯ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡಕ್ಕೆ, ಭರವಸೆಯ ಯುವ ವೇಗಿ ಜೋಫ್ರಾ ಅರ್ಚರ್ ಅಲಭ್ಯರಾಗಿದ್ದಾರೆ. ಗಾಯಾಳಾಗಿರುವ ಅವರ ಬದಲು ಮಾರ್ಕ್ ವುಡ್‌ಗೆ ಸ್ಥಾನ ನೀಡಲಾಗಿದೆ.
ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್, 43 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ. ಆರಂಭಿಕ ಜಾಕ್ ಕ್ರಾವ್ಲೆ (37) ಮತ್ತು ಜೋ ಡೆನ್ಲಿ (11) ಕ್ರೀಸ್‌ನಲ್ಲಿದ್ದಾರೆ. 36 ರನ್ ಗಳಿಸಿದ್ದ ಡೊಮಿನಿಕ್ ಸಿಬ್ಲೆ, ಕಗಿಸೊ ರಬಡ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ 107 ರನ್ ಗಳಿಂದ ಗೆದ್ದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ್ದ ಆಂಗ್ಲರು 189 ರನ್ ಗಳಿಂದ ಜಯ ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.