ADVERTISEMENT

ಪರ್ತ್ ಟೆಸ್ಟ್ | ಇನಿಂಗ್ಸ್ ಆರಂಭಿಸಲು ರಾಹುಲ್ ಸಿದ್ಧ: ಬೂಮ್ರಾ ನಾಯಕತ್ವ

ಪರ್ತ್ ಟೆಸ್ಟ್: ರೋಹಿತ್ ಶರ್ಮಾ ಗೈರು; ಜಸ್‌ಪ್ರೀತ್ ಬೂಮ್ರಾ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 22:05 IST
Last Updated 17 ನವೆಂಬರ್ 2024, 22:05 IST
ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ 
ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್    

ಪರ್ತ್: ಭಾನುವಾರ ದೀರ್ಘ ಸಮಯದವರೆಗೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ಕೆ.ಎಲ್. ರಾಹುಲ್ ತಾವು ಫಿಟ್ ಆಗಿರುವುದಾಗಿ ಸಂದೇಶ ನೀಡಿದರು. ರೋಹಿತ್ ಶರ್ಮಾ ಅವರು ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಡುವುದಿಲ್ಲವೆಂಬುದು ಖಚಿತವಾಗಿದ್ದು, ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಈ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸುವರು. ರೋಹಿತ್ ಶರ್ಮಾ ದಂಪತಿಗೆ ಶುಕ್ರವಾರ ಗಂಡುಮಗು ಜನಿಸಿತ್ತು. ಆದ್ದರಿಂದ ರೋಹಿತ್ ಅವರು ಮೊದಲ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅಡಿಲೇಡ್‌ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. 

ಶುಕ್ರವಾರ  ಇಲ್ಲಿ ನಡೆದಿದ್ದ ಇಂಟ್ರಾಸ್ಕ್ವಾಡ್ ಪಂದ್ಯದಲ್ಲಿ  ಕೆ.ಎಲ್. ರಾಹುಲ್ ಅವರ ಮೊಣಕೈಗೆ  ಚೆಂಡು ಬಡಿದು ಪೆಟ್ಟಾಗಿತ್ತು. ಕೂಡಲೇ ಮೈದಾನದಿಂದ ಹೊರನಡೆದಿದ್ದ ಅವರು ಚಿಕಿತ್ಸೆ ಪಡೆದಿದ್ದರು. ಆದ್ದರಿಂದ ಅವರು ಆಡುವ ಕುರಿತು ಅನುಮಾನಗಳಿದ್ದವು. ಇದೀಗ  ಅವರು ನೆಟ್ಸ್‌ನಲ್ಲಿ ತಮ್ಮ ಫಿಟ್‌ನೆಸ್ ಸಾಬೀತು ಮಾಡಿದ್ದಾರೆ. ಅವರ ಹಾವಭಾವದಲ್ಲಿ ಆತ್ಮವಿಶ್ವಾಸವಿತ್ತು. ಉಲ್ಲಾಸಭರಿತರಾಗಿ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಅವರ ಗಾಯ ಶಮನವಾಗಿರುವುದು ಸ್ಪಷ್ಟವಾಗಿದೆ.

ADVERTISEMENT

32 ವರ್ಷದ ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲು ತಂಡದ ಮ್ಯಾನೇಜ್‌ಮೆಂಟ್ ಹಸಿರು ನಿಶಾನೆ ತೋರಿಸಿದ್ದಾರೆಂದು ಮೂಲಗಳು ಹೇಳಿವೆ. ಆದರೆ ಶುಭಮನ್ ಗಿಲ್ ಅವರ ಹೆಬ್ಬೆರಳಿನ ಮೂಳೆ ಮುರಿತದಿಂದಾಗಿ ಮೊದಲ ಟೆಸ್ಟ್ ಆಡುತ್ತಿಲ್ಲ. 

‘ಆ ದಿನ ಪೆಟ್ಟು ಜೋರಾಗಿಯೇ ಬಿದ್ದಿತ್ತು. ಚಿಕಿತ್ಸೆ ನಂತರ ಸುಧಾರಿಸಿಕೊಂಡಿದ್ದೇನೆ. ಇವತ್ತು ಸಂಪೂರ್ಣ ಗುಣಮುಖನಾಗಿರುವೆ. ಮೊದಲ ಪಂದ್ಯಕ್ಕೆ ಸಿದ್ಧವಾಗುತ್ತಿರುವೆ. ಇಲ್ಲಿಗೆ (ಆಸ್ಟ್ರೇಲಿಯಾ) ನಾನು ಬೇಗ ಬರಲು ಸಾಧ್ಯವಾಗಿದ್ದು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡಿದ್ದು ಸಂತಸವಾಗಿದೆ. ಪೂರ್ವಸಿದ್ಧತೆ ನಡೆಸಲೂ ಬಹಳಷ್ಟು ಸಮಯ ಲಭಿಸಿದೆ’ ಎಂದು ರಾಹುಲ್ ಅವರು ಬಿಸಿಸಿಐ ಎಕ್ಸ್‌ನಲ್ಲಿ ಹಾಕಿರುವ ವಿಡಿಯೊದಲ್ಲಿ ಹೇಳಿದ್ದಾರೆ. 

ಮುಂಬೈನಿಂದ ಆಸ್ಟ್ರೇಲಿಯಾಕ್ಕೆ ತಂಡವು ಹೊರಡುವ ಮುನ್ನಾ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಕೋಚ್ ಗೌತಮ್ ಗಂಭೀರ್ ಅವರು ರೋಹಿತ್ ಬರದಿದ್ದರೆ, ರಾಹುಲ್‌ಗೆ ಅಗ್ರಕ್ರಮಾಂಕಕ್ಕೆ ಬಡ್ತಿ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. 

ರಾಹುಲ್ ಗಾಯದ ಕುರಿತು ಪ್ರತಿಕ್ರಿಯಿಸಿರುವ ತಂಡದ ಫಿಸಿಯೊ ಕಮಲೇಶ್ ಜೈನ್, ‘ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಅದೃಷ್ಟವಶಾತ್ ಮೂಳೆ ಮುರಿತವಿರಲಿಲ್ಲ. ಗಾಯದ ನಂತರದ 48 ಗಂಟೆಗಳ ಅವಧಿಯಲ್ಲಿ ನೀಡಿದ ಚಿಕಿತ್ಸೆಗಳಿಗೆ ಅವರು  ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರು ಪಂದ್ಯಗಳಲ್ಲಿ ಆಡಲು ಸಿದ್ಧವಾಗಿದ್ದಾರೆ’ಎಂದಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ಉಳಿದ ದೇವದತ್ತ

ಭಾರತ ಎ ತಂಡದಲ್ಲಿ ಆಡಿದ್ದ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲಿಯೇ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಅವರೊಂದಿಗೆ ಮೂವರು ಬೌಲರ್‌ಗಳು ಕೂಡ ಅಲ್ಲಿಯೇ ಉಳಿದಿದ್ದಾರೆ. 

ಈಚೆಗೆ ಆಸ್ಟ್ರೇಲಿಯಾ ಎ ವಿರುದ್ಧ ನಡೆದಿದ್ದ  ಎರಡು ಪಂದ್ಯಗಳ ಸರಣಿಯಲ್ಲಿ ಅವರು ಆಡಿದ್ದರು. ದೇವದತ್ತ ಜೊತೆಗೆ ಆಡಿದ್ದ ಮುಕೇಶ್ ಕುಮಾರ್, ಖಲೀಲ್ ಅಹಮದ್ ಮತ್ತು ನವದೀಪ್ ಸೈನಿ ಅವರನ್ನೂ ಆಸ್ಟ್ರೇಲಿಯಾದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಇವರೆಲ್ಲರೂ ನೆಟ್ಸ್‌ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. 

‘ದೇವದತ್ತ ಅವರು ನೆಟ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಎಸೆತಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಅಲ್ಲದೇ ಕಳೆದ ಕೆಲವು ದಿನಗಳಿಂದ ಅವರು ಮತ್ತು ಮೂವರು ಬೌಲರ್‌ಗಳು ಆಸ್ಟ್ರೇಲಿಯಾದಲ್ಲಿದ್ದು ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಉಳಿಸಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಅವಕಾಶ ನೀಡುವ ಆಯ್ಕೆಗಳು ನಮ್ಮ ಮುಂದಿರುತ್ತವೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಆಸ್ಟ್ರೇಲಿಯಾಕ್ಕಿಲ್ಲ ಶಮಿ; ಪ್ರಸಿದ್ಧಗೆ ಅವಕಾಶ?

ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಗಮನ ಸೆಳೆದ ವೇಗಿ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾಕ್ಕೆ ತೆರಳುತ್ತಿಲ್ಲ. ಅವರು ಮುಂದಿನ ವಾರ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ.  ಇದರಿಂದಾಗಿ  ಪರ್ತ್ ಟೆಸ್ಟ್‌ನಲ್ಲಿ ಆಡುವ ಭಾರತ ತಂಡದಲ್ಲಿ ಮೂರನೇ ವೇಗಿಯಾಗಿ ಸ್ಥಾನ ಪಡೆಯಲು ಬೌಲರ್‌ಗಳ ಪೈಪೋಟಿ ಜೋರಾಗಿದೆ. ಪ್ರಮುಖವಾಗಿ ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ಅವರ ನಡುವೆ ಸ್ಪರ್ಧೆ ಇದೆ. ಹರ್ಷಿತ್ ಅವರು 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು 140 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಎಸೆತಗಳನ್ನು ಹಾಕಬಲ್ಲರು. ಜೊತೆಗೆ ಬೌನ್ಸರ್‌ಗಳನ್ನು ಉತ್ತಮವಾಗಿ ಪ್ರಯೋಗಿಸಬಲ್ಲರು. ಈ ಅಂಶಗಳು ಆಯ್ಕೆಗಾರರ ಗಮನ ಸೆಳೆದಿವೆ.  ಇನ್ನೊಂದೆಡೆ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಕನ್ನಡಿಗ ಪ್ರಸಿದ್ಧ ಅವರೊಂದಿಗೆ ಹೆಚ್ಚು ಹೊತ್ತು ಮಾರ್ಗದರ್ಶನ ನೀಡಿದರು. ಈಚೆಗೆ ನಡೆದ ಎ ತಂಡಗಳ ಸರಣಿಯಲ್ಲಿ ಪ್ರಸಿದ್ಧ ಅವರು ಗಮನ ಸೆಳೆದಿದ್ದರು. ಪ್ರಸಿದ್ಧ ಅವರಿಗೆ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅನುಭವ ಇದೆ.  ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ –ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೇ  ಮೊಹಮ್ಮದ್ ಶಮಿ ಅವರು ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಆದರೆ ಅದು ಮೊದ ಲ ಮತ್ತು ಎರಡನೇ ಪಂದ್ಯದಲ್ಲಿ ಆಗಲಿಕ್ಕಿಲ್ಲ. ನಂತರದ ಪಂದ್ಯಗಳಲ್ಲಿ ಅವರು ಆಸ್ಟ್ರೇಲಿಯಾಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.  ‘ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡುವ ಬಂಗಾಳ ತಂಡವನ್ನು ಸೋಮವಾರ ಆಯ್ಕೆ ಮಾಡಲಾಗುವುದು. ಶಮಿ ಅವರು ಆಸ್ಟ್ರೇಲಿಯಾಕ್ಕೆ ತೆರಳುತ್ತಿಲ್ಲ. ಅವರು ರಾಜ್ಯ ತಂಡದ ಆಯ್ಕೆಗೆ ಲಭ್ಯರಿರುವ ವಿಶ್ವಾಸವಿದೆ’ ಎಂದು ಬಂಗಾಳ ತಂಡದ ಮುಖ್ಯ ಕೋಚ್ ಲಕ್ಷ್ಮೀ ರತನ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.