ಚೆನ್ನೈ : ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿ ಜಯಿಸುವ ಕನಸು ನನಸಾಗಬೇಕಾದರೆ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮತ್ತು ಮಿಚೆಲ್ ಮಾರ್ಷ್ ಬ್ಯಾಟಿಂಗ್‌ಗೆ ಪ್ರತ್ಯುತ್ತರ ನೀಡುವ ಸವಾಲು ಭಾರತ ತಂಡದ ಮುಂದಿದೆ.
ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಮೂರನೇ ಮತ್ತು ಕೊನೆಯ ಪಂದ್ಯವು ಸರಣಿ ಗೆಲುವಿಗೆ ನಿರ್ಣಾಯಕವಾಗಲಿದೆ. ಭಾರತ ತಂಡವು ಜಯಿಸಬೇಕಾದರೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಮಿಂಚುವುದು ಅವಶ್ಯಕವಾಗಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜ ಅವರ ಬ್ಯಾಟಿಂಗ್‌ನಿಂದಾಗಿ ತಂಡವು ಜಯಿಸಿತ್ತು. ಆ ಪಂದ್ಯದಲ್ಲಿಯೂ ಮಿಚೆಲ್ ಸ್ಟಾರ್ಕ್ ಆತಿಥೇಯರ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು. ಮಾರ್ಷ್ ಅರ್ಧಶತಕ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಸ್ಟಾರ್ಕ್ ಐದು ವಿಕೆಟ್ ಗೊಂಚಲನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಮಾರ್ಷ್ ಅಬ್ಬರದ ಬ್ಯಾಟಿಂಗ್ ಮಾಡಿದ್ದರು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಲಯಕ್ಕೆ ಮರಳಿದರೆ ಮಾತ್ರ ದೊಡ್ಡ ಮೊತ್ತ ಗಳಿಸಲು ಅಥವಾ ಬೆನ್ನಟ್ಟಿ ಯಶಸ್ವಿಯಾಗಲು ಸಾಧ್ಯವಾಗಬಹುದು. ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಹೆಚ್ಚು ಯಶಸ್ವಿಯಾಗಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.
ಸಾಗರ ತಟದ ಊರಿನಲ್ಲಿ ಧಗೆಯ ವಾತಾವರಣದ ಪರಿಣಾಮ ಪಿಚ್ ಮೇಲೆ ಆಗಬಹುದು. ಮೊದಲೆರಡು ಪಂದ್ಯಗಳೂ ಸಮುದ್ರ ತೀರದ ನಗರಗಳಲ್ಲಿಯೇ ಆಗಿದ್ದವು. ಅಲ್ಲಿಯ ಧಗೆ ಮತ್ತು ಸಂಜೆಯ ಹೊತ್ತಿನ ವಾತಾವರಣದ ಸವಾಲನ್ನು ಸಮರ್ಥವಾಗಿ ಮೀರಿ ನಿಂತಿದ್ದ ಮಿಚೆಲ್ ಸ್ಟಾರ್ಕ್ ಕೌಶಲದ ಮುಂದೆ ಬ್ಯಾಟರ್‌ಗಳು ಮಂಡಿಯೂರಿದ್ದರು.
ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲಿನಿಂದಲೂ ನಿಧಾನಗತಿಯ ಬೌಲರ್‌ಗಳಿಗೆ ನೆರವು ನೀಡುವ ಪಿಚ್ ಸಿದ್ಧವಾಗುತ್ತದೆ. ಅದರಿಂದಾಗಿ ಮಧ್ಯದ ಓವರ್‌ಗಳಲ್ಲಿ ರನ್ ಗಳಿಸುವುದು ಕಷ್ಟವಾಗುತ್ತದೆ. ಇಲ್ಲಿ ಪಿಚ್‌ಗೆ ಹೊಸಹಾಸು ಹಾಕಲಾಗಿದ್ದು, ಯಾವ ರೀತಿಯಲ್ಲಿ ಆಟ ಹೊರಹೊಮ್ಮಲಿದೆ ಎಂಬ ಕುತೂಹಲ ಗರಿಗೆದರಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜೈದೇವ್ ಉನದ್ಕತ್
ಆಸ್ಟ್ರೇಲಿಯಾ: ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಷೇನ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರಾನ್ ಗ್ರೀನ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಆಗರ್, ಮಿಚೆಲ್ ಸ್ಟಾರ್ಕ್, ನೇಥನ್ ಎಲಿಸ್, ಆ್ಯಡಂ ಜಂಪಾ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.