ADVERTISEMENT

ಜಾಮನಗರ ರಾಜಮನೆತನ: ಉತ್ತರಾಧಿಕಾರಿಯಾಗಿ ಅಜಯ್ ಜಡೇಜ

ಈಗಿನ ಮುಖ್ಯಸ್ಥರಿಂದಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 12:34 IST
Last Updated 12 ಅಕ್ಟೋಬರ್ 2024, 12:34 IST
ಅಜಯ್ ಜಡೇಜ
ಅಜಯ್ ಜಡೇಜ   

ಜಾಮನಗರ (ಪಿಟಿಐ): ಗುಜರಾತ್‌ನ ಈ ಹಿಂದಿನ ಜಾಮನಗರ ಸಂಸ್ಥಾನದ ರಾಜವಂಶದ ಮುಖ್ಯಸ್ಥ ಶತ್ರುಸಲ್ಯಸಿಂಹ ಜಡೇಜ ಅವರು ತಮ್ಮ ಸ್ಥಾನಕ್ಕೆ  ಮಾಜಿ ಕ್ರಿಕೆಟಿಗ (ಹಾಗೂ ಸೋದರಿಯ ಪುತ್ರ) ಅಜಯ್ ಜಡೇಜ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದಾರೆ.

ಶನಿವಾರ, ದಸರೆಯ ದಿನ ಶತ್ರುಸಲ್ಯಸಿಂಹ ಅವರು ಈ ಘೋಷಣೆ ಮಾಡಿದ್ದಾರೆ. 53 ವರ್ಷ ವಯಸ್ಸಿನ ಜಡೇಜ ಅವರು 1992 ರಿಂದ 2000 ಅವಧಿಯಲ್ಲಿ ಭಾರತ ತಂಡದ ಪರ 196 ಏಕದಿನ ಪಂದ್ಯ ಹಾಗೂ 15 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ಜಡೇಜ ಅವರ ತಂದೆ ದೌಲತ್‌ಸಿಂಹಜಿ ಜಡೇಜ ಅವರು ಜಾಮನಗರದ ಮಹಾರಾಜ ಶತ್ರುಸಲ್ಯಸಿಂಹ ಜಡೇಜ ಅವರ ಚಿಕ್ಕಪ್ಪ. ದೌಲತ್‌ಸಿಂಹಜಿ ಅವರು ಮೂರು ಬಾರಿ (1971– 1984) ಜಾಮನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ADVERTISEMENT

‘ವನವಾಸ, ಅಜ್ಞಾತವಾಸ ಮುಗಿಸಿ ಪಾಂಡವರು ವಿಜಯಿಯಾದ ದಿನ ದಸರೆಯ ಹಬ್ಬ ಆಚರಿಸಲಾಗುತ್ತದೆ. ಈ ಶುಭದಿನ ನನ್ನ ಮುಂದಿದ್ದ ದ್ವಂದ್ವವೊಂದು ಕೊನೆಗೊಂಡಿದ್ದು, ಜಡೇಜ ಅವರು ನನ್ನ ಸ್ಥಾನಕ್ಕೆ ಉತ್ತರಾಧಿಕಾರಿಯಾಗಲಿದ್ದಾರೆ’ ಎಂದು ಮಹಾರಾಜ ಜಾಮಸಾಹೇಬ ಎಂದೇ ಖ್ಯಾತರಾದ ಶತ್ರುಸಲ್ಯಸಿಂಹ ಹೇಳಿಕೆಯಲ್ಲಿ ಘೋಷಿಸಿದ್ದಾರೆ.

ಶತ್ರುಸಲ್ಯಸಿಂಹಜಿ ಅವರೂ ಕ್ರಿಕೆಟಿಗರಾಗಿದ್ದು, 1966–67ನೇ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡಕ್ಕೆ ನಾಯಕರಾಗಿದ್ದರು. ನಂತರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು. ತಂದೆಯ ನಿಧನದ ನಂತರ, 1966ರ ಫೆಬ್ರುವರಿ 3ರಂದು ಅವರನ್ನು ನವನಗರದ ರಾಜವಂಶ ಕುಟುಂಬದ ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ನೇಪಾಳದ ರಾಜವಂಶದ ಸದಸ್ಯೆಯೊಬ್ಬರನ್ನು ವಿವಾಹವಾಗಿದ್ದರು. ಈ ಕುಟುಂಬವು ಕ್ರಿಕೆಟ್‌ ದಿಗ್ಗಜ ರಣಜಿತ್‌ ಜಡೇಜ ಅವರ ಪರಂಪರೆ ಹೊಂದಿದೆ. ಅವರು 1907 ರಿಂದ 1933ರವರೆಗೆ ಜಾಮನಗರ ಸಂಸ್ಥಾನ ಆಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.