ಹೆಸರು, ಆಸ್ತಿಗಳಿಸಿದಾಕ್ಷಣ ಬಹುತೇಕರು ತಾವು ಹುಟ್ಟಿ ಬೆಳೆದ ಹಳ್ಳಿಯನ್ನು ಮರೆತು ನಗರಗಳಲ್ಲಿ ಐಷಾರಾಮಿ ಬದುಕು ಸಾಗಿಸುವುದು ಸಾಮಾನ್ಯ. ಆದರೆ ಮುನಾಫ್ ಪಟೇಲ್ ಇದಕ್ಕೆ ತದ್ವಿರುದ್ಧ. ಆಪ್ತ ವಲಯದಲ್ಲಿ ‘ಮುನ್ನಾ ಭಾಯ್’ ಎಂದೇ ಪರಿಚಿತರಾಗಿರುವ ಅವರು 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಸಾಧಿಸಿದ್ದು ಅಪಾರ.
2011ರ ಜನವರಿಯಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಮರೆತಿರಲಿಕ್ಕಿಲ್ಲ. ಆ ಹಣಾಹಣಿಯಲ್ಲಿಭಾರತಕ್ಕೆ ರೋಚಕ (ಒಂದು ರನ್‌ನಿಂದ) ಗೆಲುವು ತಂದುಕೊಟ್ಟಿದ್ದು ಇದೇ ಮುನಾಫ್. 191 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ್ದ ಹರಿಣಗಳ ತಂಡವನ್ನು 189 ರನ್‌ಗಳಿಗೆ ಕಟ್ಟಿಹಾಕುವಲ್ಲಿ ‘ಇಖರ್ ಎಕ್ಸ್‌ಪ್ರೆಸ್’ ಮಹತ್ವದ ಪಾತ್ರ ನಿಭಾಯಿಸಿದ್ದರು. ನಾಲ್ಕು ವಿಕೆಟ್ ಉರುಳಿಸಿದ್ದ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದಿತ್ತು. 2011ರ ಏಕದಿನ ವಿಶ್ವಕಪ್‌ನಲ್ಲೂ ‘ಮುನ್ನಾ ಭಾಯ್’ ಮಿಂಚಿದ್ದರು.
ಯಾರ್ಕರ್ ಎಸೆತಗಳ ಮೂಲಕ ಮೈದಾನದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತಿದ್ದ ಆರಡಿ ಎತ್ತರದ ಮುನಾಫ್, ಈಗ ಕೋವಿಡ್ ಮಹಾಮಾರಿಯ ವಿರುದ್ಧ ಸಮರ ಸಾರಿದ್ದಾರೆ.
ಗುಜರಾತ್‌ನ ಭರೂಚಾ ಜಿಲ್ಲೆಯವರಾದ ಅವರು, ಸ್ವಗ್ರಾಮ ಇಖರ್‌ನಲ್ಲಿ ಕೋವಿಡ್ ಕೇಂದ್ರ ಆರಂಭಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಯುವರಾಜ್ ಸಿಂಗ್, ಸುರೇಶ್ ರೈನಾ, ಗೌತಮ್ ಗಂಭೀರ್, ಪ್ರಗ್ಯಾನ್ ಓಜಾ, ವೃದ್ಧಿಮಾನ್ ಸಹಾ ಸೇರಿದಂತೆ ಅನೇಕ ಕ್ರಿಕೆಟಿಗರು ‘ಸರ್ಫಿ’ಯ ಕಾರ್ಯವನ್ನು ಕೊಂಡಾಡಿದ್ದಾರೆ.
ಏಪ್ರಿಲ್‌ನಲ್ಲಿ ಇಖರ್ ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಐದು ಮಂದಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಗ್ರಾಮವನ್ನು ‘ಕಂಟೈನ್‌ಮೆಂಟ್’ ವಲಯ ಎಂದು ಘೋಷಿಸಲಾಗಿತ್ತು. ಮನೆಗಳಿಂದ ಹೊರ ಬರುವಾಗ ಮುಖಗವಸು ಧರಿಸಿ, ಅಂತರ ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳು ಎಷ್ಟೇ ಹೇಳಿದರೂ ಜನ ಕ್ಯಾರೆ ಎನ್ನಲಿಲ್ಲ.
‘ಗ್ರಾಮಸ್ಥರು ತಮ್ಮ ಮಾತು ಕೇಳುವುದಿಲ್ಲ ಎಂಬುದು ಅರಿವಾದೊಡನೆಯೇ ಆರೋಗ್ಯ ಇಲಾಖೆಯ ಅಧಿಕಾರಿಗಳು ‘ಸ್ಥಳೀಯ ಹೀರೊ’ ಮುನಾಫ್ ಮೊರೆ ಹೋದರು. 38 ವರ್ಷದ ಮುನಾಫ್ ಅಖಾಡಕ್ಕೆ ಇಳಿದ ಕೂಡಲೇ ಕೊರೊನಾ ಸೋಂಕಿನಿಂದ ಆಗುವ ಅಪಾಯ ಹಾಗೂ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದವರ ಮನವೊಲಿಸುವಲ್ಲೂ ಯಶಸ್ವಿಯಾದರು’ ಎಂದು ಸ್ಥಳೀಯ ನಿವಾಸಿ ಮುನೀರ್ ಪಟೇಲ್ ಹೇಳಿದ್ದಾರೆ.
ಮುನಾಫ್ ಅವರ ಸಮಾಜಮುಖಿ ಕಾರ್ಯ ಇತರರಿಗೂ ಮಾದರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.