ನವದೆಹಲಿ: ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 2025ರ ಆವೃತ್ತಿಗೂ ಮುನ್ನ ತಂಡದ ಮುಖ್ಯ ಕೋಚ್ ಹಾಗೂ ನಿರ್ದೇಶಕರನ್ನು ಗುರುವಾರ ನೇಮಕ ಮಾಡಿದೆ. ಈ ಸ್ಥಾನಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಹೇಮಂಗ್ ಬದಾನಿ ಮತ್ತು ವೇಣುಗೋಪಾಲ್ ರಾವ್ ಅವರನ್ನು ಕ್ರಮವಾಗಿ ನೇಮಿಸಿದೆ.
ಕಳೆದ ಏಳು ವರ್ಷಗಳಿಂದ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರನ್ನು 2024ರ ಆವೃತ್ತಿಯ ಬಳಿಕ ಕೈಬಿಡಲಾಗಿತ್ತು. ಅವರ ಸ್ಥಾನದಲ್ಲಿ ಮುಂದುವರಿಯಲಿರುವ 47 ವರ್ಷದ ಬದಾನಿ ಅವರು ಭಾರತ ತಂಡದ ಪರ ನಾಲ್ಕು ಟೆಸ್ಟ್, 40 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ವಿವಿಧ ಲೀಗ್‌ಗಳಲ್ಲಿ ಹಲವು ತಂಡಗಳಿಗೆ ಮಾರ್ಗದರ್ಶನ ಮಾಡಿದ ಅನುಭವವನ್ನೂ ಹೊಂದಿದ್ದಾರೆ
2021ರಿಂದ 2023ರ ವರೆಗೆ 'ಸನ್‌ರೈಸರ್ಸ್ ಹೈದರಾಬಾದ್' ತಂಡದ ಫೀಲ್ಡಿಂಗ್ ಕೋಚ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಲಂಕನ್ ಪ್ರೀಮಿಯರ್ ಲೀಗ್‌ನಲ್ಲಿ ಸತತ ಎರಡು ಬಾರಿ (2021, 2022ರಲ್ಲಿ) ಕಪ್ ಗೆದ್ದ 'ಜಫ್ನಾ ಕಿಂಗ್ಸ್' ತಂಡದ ಸಹಾಯಕ ಕೋಚ್ ಆಗಿದ್ದ ಅವರು, 2023ರಲ್ಲಿ ನಡೆದ ಎಸ್‌ಎ–20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ 'ಸನ್‌ರೈಸರ್ಸ್ ಈಸ್ಟರ್ನ್' ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದರು.
ಇಂಟರ್‌ನ್ಯಾಷನಲ್ ಲೀಗ್ ಟಿ20 (ಐಎಲ್‌ಟಿ20) ಟೂರ್ನಿಯ 2024ರ ಆವೃತ್ತಿಯಲ್ಲಿ ರನ್ನರ್ಸ್‌ಅಪ್ ಆದ 'ದುಬೈ ಕ್ಯಾಪಿಟಲ್ಸ್' ತಂಡಕ್ಕೂ ಅವರು ಮುಖ್ಯ ಕೋಚ್ ಆಗಿದ್ದರು.
ಡೆಲ್ಲಿ ಪಡೆಯ ಹೊಸ ಜವಾಬ್ದಾರಿ ಬಗ್ಗೆ ಪ್ರತಿಕ್ರಿಯಿಸಿರುವ ಬದಾನಿ, 'ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರುತ್ತಿರುವುದು ನನ್ನ ಪಾಲಿಗೆ ಅತಿದೊಡ್ಡ ಗೌರವವಾಗಿದೆ. ನನ್ನ ಮೇಲೆ ವಿಶ್ವಾಸವಿರಿಸಿ, ಹೊಣೆ ವಹಿಸಿರುವ ಮಾಲೀಕರಿಗೆ ಆಭಾರಿಯಾಗಿರುತ್ತೇನೆ' ಎಂದಿದ್ದಾರೆ.
ನೂತನ ನಿರ್ದೇಶಕರಾಗಿರುವ ವೇಣುಗೋಪಾಲ್ ರಾವ್ ಅವರು ಟೀಂ ಇಂಡಿಯಾ ಪರ 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನ 2009ರ ಆವೃತ್ತಿಯಲ್ಲಿ 'ಡೆಕ್ಕನ್ ಚಾರ್ಜರ್ಸ್' ಪರ ಆಡಿದ್ದರು. ಮೂರು ಆವೃತ್ತಿಗಳಲ್ಲಿ 'ಡೆಲ್ಲಿ ಡೇರ್‌ಡೆವಿಲ್ಸ್' ತಂಡದ ಸದಸ್ಯರಾಗಿದ್ದರು.
ಐಎಲ್‌ಟಿ20 ಲೀಗ್‌ನ ಉದ್ಘಾಟನಾ ಟೂರ್ನಿಯಲ್ಲಿ 'ದುಬೈ ಕ್ಯಾಪಿಟಲ್ಸ್' ತಂಡದ ಮೆಂಟರ್ ಆಗಿದ್ದ ಅವರು, ನಂತರ ನಿರ್ದೇಶಕರಾಗಿದ್ದರು. 'ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿರುವುದಾಗಿ' ರಾವ್ ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್‌ನ 2021ರ ಆವೃತ್ತಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಡಿಸಿ, ನಂತರದ ಟೂರ್ನಿಗಳಲ್ಲಿ ಅಗ್ರ ನಾಲ್ಕರ ಸ್ಥಾನಕ್ಕೇರಲು ಪರದಾಡುತ್ತಿದೆ.
ಜುಲೈನಲ್ಲಿ ಡೆಲ್ಲಿ ಕ್ಯಾಂಪ್‌ನಲ್ಲಿ ಸ್ಥಾನ ಕಳೆದುಕೊಂಡಿದ್ದ ಪಾಂಟಿಂಗ್, ಇದೀಗ ಪಂಜಾಬ್ ಕಿಂಗ್ಸ್‌ಗೆ ಸೇರಿದ್ದಾರೆ. ಅವರನ್ನು ಮುಖ್ಯ ಕೋಚ್ ಆಗಿ ಸೆಪ್ಟೆಂಬರ್‌ನಲ್ಲಿ ನೇಮಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.