ADVERTISEMENT

ವಿಲಿಯರ್ಸ್, ಕುಕ್, ಭಾರತದ ನೀತು ಡೇವಿಡ್ ಐಸಿಸಿಯ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2024, 13:06 IST
Last Updated 16 ಅಕ್ಟೋಬರ್ 2024, 13:06 IST

ದುಬೈ: ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌, ಇಂಗ್ಲೆಂಡ್‌ನ ಟೆಸ್ಟ್ ಪರಿಣತ ಬ್ಯಾಟರ್‌ ಆಲಿಸ್ಟರ್‌ ಕುಕ್‌ ಹಾಗೂ ಭಾರತದ ಮಾಜಿ ಆಟಗಾರ್ತಿ ನೀತು ಡೇವಿಡ್‌ ಅವರು ಐಸಿಸಿಯ 'ಕ್ರಿಕೆಟ್‌ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.

ಹಾಲ್‌ ಆಫ್‌ ಫೇಮ್‌ ಪಟ್ಟಿಗೆ ಮೂವರನ್ನು ಹೊಸದಾಗಿ ಸೇರಿಸಿರುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಬುಧವಾರ ಪ್ರಕಟಿಸಿದೆ.

ಎಬಿ ಡಿ ವಿಲಿಯರ್ಸ್‌: 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿಲಿಯರ್ಸ್‌, ಟೆಸ್ಟ್‌ ಮತ್ತು ಏಕದಿನ ಮಾದರಿಯಲ್ಲಿ ಶೇ 50ಕ್ಕಿಂತಲೂ ಅಧಿಕ ಸರಾಸರಿಯಲ್ಲಿ 20,014 ರನ್‌ ಗಳಿಸಿದ್ದಾರೆ. 14 ವರ್ಷಗಳ ವೃತ್ತಿ ಜೀವನದುದ್ದಕ್ಕೂ ಸ್ಫೋಟಕ ಹಾಗೂ ವಿಭಿನ್ನ ಶೈಲಿಯ ಬ್ಯಾಟಿಂಗ್‌ ಮೂಲಕ ರಂಜಿಸಿದ್ದ ಅವರು, ಅದ್ಭುತ ಕ್ಷೇತ್ರ ರಕ್ಷಣೆ ಮೂಲಕವೂ ಗಮನ ಸೆಳೆದಿದ್ದರು.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜಾಕ್‌ ಕಾಲಿಸ್‌ (25,534 ರನ್‌) ಮಾತ್ರ ವಿಲಿಯರ್ಸ್‌ಗಿಂತ ಮುಂದಿದ್ದಾರೆ.

ಆಲಿಸ್ಟರ್‌ ಕುಕ್‌: ಇಂಗ್ಲೆಂಡ್‌ ಪರ 250ಕ್ಕೂ ಅಧಿಕ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕುಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಹೆಸರುವಾಸಿಯಾಗಿದ್ದರು. 2018ರಲ್ಲಿ ನಿವೃತ್ತಿ ಘೋಷಿಸಿದ ಅವರು, ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಪರ ಅತಿಹೆಚ್ಚು (12,472) ರನ್‌ ಮತ್ತು ಶತಕ (33) ಗಳಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಜೋ ರೂಟ್‌ (12,694 ರನ್ ಮತ್ತು 35 ಶತಕ) ಮೊದಲ ಸ್ಥಾನದಲ್ಲಿದ್ದಾರೆ.

ಕುಕ್‌ ನಾಯಕತ್ವದಲ್ಲಿ ಇಂಗ್ಲೆಂಡ್‌ ಪಡೆಯು ಭಾರತ ತಂಡವನ್ನು ತವರಿನಲ್ಲೇ 28 ವರ್ಷಗಳ ಬಳಿಕ ಮಣಿಸಿದ ಸಾಧನೆ ಮಾಡಿತ್ತು. 2012–13ರಲ್ಲಿ ಅಹಮದಾಬಾದ್‌, ಮುಂಬೈ, ಕೋಲ್ಕತ್ತ ಮತ್ತು ನಾಗ್ಪುರದಲ್ಲಿ ನಡೆದಿದ್ದ ನಾಲ್ಕು ಪಂದ್ಯಗಳ ಟೂರ್ನಿಯನ್ನು ಆಂಗ್ಲರು 2–1ರಿಂದ ಗೆದ್ದುಕೊಂಡಿದ್ದರು.

ನೀತು ಡೇವಿಡ್‌: ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿದ ದಾಖಲೆ ಹೊಂದಿರುವ ನೀತು ಅವರೂ ಐಸಿಸಿಯ ಗೌರವಕ್ಕೆ ಭಾಜನರಾಗಿದ್ದಾರೆ. ಶೆಮ್ಶೆಡ್‌ಪುರದಲ್ಲಿ 1995ರಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಅವರು 53 ರನ್‌ ನೀಡಿ 8 ವಿಕೆಟ್‌ ಪಡೆದಿದ್ದರು. ಇದು ಮಹಿಳೆಯರ ಟೆಸ್ಟ್‌ನಲ್ಲಿ ಈಗಲೂ ದಾಖಲೆಯೇ ಆಗಿದೆ.

ಸದ್ಯ ಭಾರತ ಮಹಿಳಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಡೇವಿಡ್‌, ಮಾಜಿ ನಾಯಕಿ ಡಯಾನಾ ಎಡುಲ್ಚಿ ಬಳಿಕ 'ಹಾಲ್‌ ಆಫ್‌ ಫೇಮ್‌' ಪಟ್ಟಿ ಸೇರಿದ ಭಾರತದ ಕ್ರಿಕೆಟರ್‌ ಇವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.