ADVERTISEMENT

ಅಸಭ್ಯ ವರ್ತನೆ: ಸಮರವೀರ ವಿರುದ್ಧ ಆಸ್ಟ್ರೇಲಿಯಾ ಕ್ರಮ

20 ವರ್ಷ ಕೋಚಿಂಗ್ ನೀಡದಂತೆ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 14:54 IST
Last Updated 19 ಸೆಪ್ಟೆಂಬರ್ 2024, 14:54 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಮೆಲ್ಬರ್ನ್‌: ತುಚ್ಛರೀತಿಯಲ್ಲಿ ನಡೆದುಕೊಂಡು ಕ್ರಿಕೆಟ್‌ ಸಂಹಿತೆ ಉಲ್ಲಂಘಿಸಿದ್ದಕ್ಕೆ, ವಿಕ್ಟೋರಿಯಾ ಮಹಿಳಾ ತಂಡಕ್ಕೆ ಕೋಚ್‌ ಆಗಿದ್ದ ಶ್ರೀಲಂಕಾ ಮಾಜಿ ಟೆಸ್ಟ್‌ ಕ್ರಿಕೆಟಿಗ ದುಲಿಪ್‌ ಸಮರವೀರ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು 20 ವರ್ಷ ಕೋಚಿಂಗ್‌ ನೀಡದಂತೆ ನಿಷೇಧ ಹೇರಿದೆ.

ADVERTISEMENT

2008ರಲ್ಲಿ ಅವರು ಮೊದಲ ಬಾರಿ ಕ್ರಿಕೆಟ್‌ ವಿಕ್ಟೋರಿಯಾ ಬ್ಯಾಟಿಂಗ್ ಕೋಚ್‌ ಆಗಿದ್ದರು. ಕಳೆದ ವರ್ಷ ಅವರನ್ನು ತಂಡದ ಹಂಗಾಮಿ ಹೆಡ್‌ ಕೋಚ್‌ ಆಗಿ ಮತ್ತು ಈ ವರ್ಷದ ಮೇ ತಿಂಗಳಲ್ಲಿ ಪೂರ್ಣಾವಧಿ ಹೆಡ್‌ ಕೋಚ್‌ ಆಗಿ ನಿಯುಕ್ತಿಗೊಳಿಸಲಾಗಿತ್ತು. ಅವರು ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೆರ್ಲರ್ನ್‌ ಸ್ಟಾರ್ಸ್‌ ತಂಡಕ್ಕೆ ಸಹಾಯಕ ಕೋಚ್ ಕೂಡ ಆಗಿದ್ದರು.

ಆಟಗಾರ್ತಿಯೊಬ್ಬರ ದೂರಿನ ಮೇರೆಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಇಂಟೆಗ್ರಿಟಿ ವಿಭಾಗವು ಅವರ ವಿರುದ್ಧ ತನಿಖೆ ನಡೆಸಿತ್ತು.

ಸಮರವೀರ 1990ರ ದಶಕದಲ್ಲಿ ಲಂಕಾ ಪರ ಏಳು ಟೆಸ್ಟ್‌ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದರು.

ಮುಂದಿನ ಎರಡು ದಶಕಗಳ ಅವಧಿಗೆ ಆಸ್ಟ್ರೇಲಿಯಾದಲ್ಲಿ ಯಾವುದೇ ಹುದ್ದೆಯನ್ನು ವಹಿಸುವುದರಿಂದ 52 ವರ್ಷ ವಯಸ್ಸಿನ ಆಟಗಾರನನ್ನು ನಿರ್ಬಂಧಿಸಲಾಗಿದೆ. ಅವರ ವರ್ತನೆ ಕ್ರಿಕೆಟ್‌ ಆಸ್ಟ್ರೇಲಿಯಾದ ನೀತಿಸಂಹಿತೆ 2.23ನೇ ವಿಧಿಯ ಗಂಭೀರ ಉಲ್ಲಂಘನೆಯಾಗಿದೆ. ಈ ವಿಧಿಯು ‘ಕ್ರಿಕೆಟ್‌ ಸ್ಪೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ, ಕ್ರಿಕೆಟ್‌ ಹಿತಾಸಕ್ತಿಗೆ ಹಾನಿಕರವಾಗಿ ವರ್ತಿಸಿದ್ದಕ್ಕೆ ಅಥವಾ ಆಟಕ್ಕೆ ಕಳಂಕ ತರುವ ವಿಷಯ’ಕ್ಕೆ ಸಂಬಂಧಿಸಿದೆ.

ಈ ನಿಷೇಧ ಸ್ವಾಗತಿಸಿರುವ ಕ್ರಿಕೆಟ್‌ ವಿಕ್ಟೋರಿಯಾ ಸಿಇಒ ನಿಕ್‌ ಕಮಿನ್ಸ್‌, ‘ಕೋಚ್‌ನಿಂದ ತೊಂದರೆಗೊಳಗಾದ ಆಟಗಾರ್ತಿಯ ಬೆಂಬಲಕ್ಕೆ ನಿಲ್ಲುವುದಾಗಿ’  ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತೆ ಧೈರ್ಯ ಮತ್ತು ಮನೋಸ್ಥೈರ್ಯ ಪ್ರದರ್ಶಿಸಿದ್ದಾರೆ. ಕ್ರೀಡಾಂಗಣದಲ್ಲಿಯೂ, ಆಚೆಯೂ ಅವರಿಗೆ ತಮ್ಮ ಗುರಿಯನ್ನು ಈಡೇರಿಸಲು ನೆರವಾಗುವುದಾಗಿ ಅವರು ಭರವಸೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸಮರವೀರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್‌, ಕ್ರಿಕೆಟ್‌ ಆಸ್ಟ್ರೇಲಿಯಾದ ನಿರ್ಧಾರಕ್ಕೆ ಬೆಂಬಲ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.