ಕಠ್ಮಂಡು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾದ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ಅವರಿಗೆ ಇಲ್ಲಿನ ನ್ಯಾಯಾಲಯ ಬುಧವಾರ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
23 ವರ್ಷದ ಲೆಗ್‌ಸ್ಪಿನ್ನರ್ ಲಮಿಚಾನೆ ಅವರು ಒಂದು ಕಾಲದಲ್ಲಿ ನೇಪಾಳ ಕ್ರಿಕೆಟ್‌ಗೆ ಪ್ರಸಿದ್ಧಿ ತಂದುಕೊಟ್ಟಿದ್ದರು. ಕ್ರೀಡಾಂಗಣದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಐಪಿಎಲ್‌ನ ತಂಡಕ್ಕೂ ಆಯ್ಕೆಯಾಗಿದ್ದರು.
2022ರಲ್ಲಿ ಕಠ್ಮಂಡುವಿನ ಹೋಟೆಲ್‌ನಲ್ಲಿ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ವಿಚಾರಣೆ ಪದೇ ಪದೇ ಮುಂದಕ್ಕೆ ಹೋಗುತ್ತಿದ್ದು, ಅಂತಿಮವಾಗಿ ಕಳೆದ ಡಿಸೆಂಬರ್‌ನಲ್ಲಿ ಅವರು ದೋಷಿ ಎಂದು ನ್ಯಾಯಾಲಯ ಹೇಳಿತ್ತು. ಶಿಕ್ಷೆಯನ್ನು ಬುಧವಾರ ಪ್ರಕಟಿಸಲಾಯಿತು.
‘ನ್ಯಾಯಾಲಯವು ಅವರಿಗೆ ಎಂಟು ವರ್ಷಗಳ ಸಜೆ ವಿಧಿಸಿದೆ’ ಎಂದು ಕಠ್ಮಡು ಜಿಲ್ಲಾ ನ್ಯಾಯಾಲಯದ ಅಧಿಕಾರಿ ರಾಮು ಶರ್ಮಾ ಎಎಫ್‌ಪಿಗೆ ತಿಳಿಸಿದ್ದಾರೆ.
ಲಮಿಚಾನೆ ಅವರಿಗೆ ₹1,85,000 (3 ಲಕ್ಷ ನೇಪಾಳಿ ರೂಪಾಯಿ) ಮೊತ್ತವನ್ನು ದಂಡವಾಗಿ ಮತ್ತು ಇದರ ಜೊತೆಗೆ ₹1,25,000 (2 ಲಕ್ಷ ನೇಪಾಳಿ ರೂಪಾಯಿ) ಮೊತ್ತವನ್ನು ಸಂತ್ರಸ್ತೆಗೆ ಮಾನಸಿಕ ಯಾತನೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಶಿಕ್ಷೆ ಪ್ರಕಟಿಸುವ ವೇಳೆ ಲಮಿಚಾನೆ ನ್ಯಾಯಾಲಯದಲ್ಲಿರಲಿಲ್ಲ. ಈ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಾಗಿ ಅವರ ವಕೀಲ ಸರೋಜ್ ಗಿಮಿರೆ ತಿಳಿಸಿದರು.
ಅತ್ಯಾಚಾರದ ವೇಳೆ ಅಪ್ರಾಪ್ತ ವಯಸ್ಸಿನವಳಾಗಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದರು. ಆದರೆ ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯವು ಆಕೆಗೆ 18 ವರ್ಷ ಎಂದು ಹೇಳಿತ್ತು.
ಲಮಿಚಾನೆ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದರು. ಅವರ ವಿರುದ್ಧ ದೂರು ಕೇಳಿಬಂದ ನಂತರ ಅವರನ್ನು ನಾಯಕತ್ವದಿಂದ ಕಿತ್ತುಹಾಕಲಾಗಿತ್ತು. ಅವರನ್ನು ಬಂಧಿಸಲಾಯಿತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರು ಆಡುವುದಕ್ಕೆ ಇದ್ದ ನಿರ್ಬಂಧವನ್ನು ಕ್ರಿಕೆಟ್ ಮಂಡಳಿ ತೆಗೆದುಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.