ಎಜ್‌ಬಾಸ್ಟನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿದೆ. ಟೀಂ ಇಂಡಿಯಾದ ಆಟವನ್ನು ಮೆಚ್ಚಿಕೊಂಡಿರುವ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕುಕ್ರಿಕೆಟ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದುಹೇಳಿದ್ದಾರೆ.
ಸೌಥಾಂಪ್ಟನ್‌ನಲ್ಲಿಗುರುವಾರ ನಡೆದ ಮೊದಲ ಪಂದ್ಯವನ್ನು 50 ರನ್ ಅಂತರದಿಂದ ಜಯಿಸಿದ್ದ ಭಾರತ, ಶನಿವಾರ ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 49 ರನ್‌ಗಳಿಂದ ಗೆದ್ದು ಬೀಗಿದೆ. ಹೀಗಾಗಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಜಯಿಸಿದ್ದು, ಕ್ಲೀನ್ ಸ್ವೀಪ್‌ನತ್ತ ಚಿತ್ತ ಹರಿಸಿದೆ.
ರೋಹಿತ್ ಶರ್ಮಾ ಬಳಗದ ಪ್ರದರ್ಶನ ಕುರಿತು ಟ್ವೀಟ್ ಮಾಡಿರುವ ಅಫ್ರಿದಿ, 'ಭಾರತ ತಂಡ ಅಮೋಘ ಆಟವಾಡಿದ್ದು,ಸರಣಿ ಜಯಕ್ಕೆ ಅರ್ಹವಾಗಿದೆ.ಬೌಲಿಂಗ್ ಪ್ರದರ್ಶನ ನಿಜವಾಗಿಯೂ ಪ್ರಭಾವಶಾಲಿಯಾಗಿತ್ತು. ಖಂಡಿತವಾಗಿಯೂ ಅವರು (ಭಾರತ ತಂಡ) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವನೆಚ್ಚಿನ ತಂಡಗಳಲ್ಲಿ ಒಂದಾಗಲಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ರವೀಂದ್ರ ಜಡೇಜ (ಅಜೇಯ 46) ಅವರ ಬಿರುಸಿನ ಆಟದ ನೆರವಿನಿಂದನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 170 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ 121 ರನ್ ಗಳಿಸಿ 17 ಓವರ್‌ಗಳಲ್ಲೇ ಸರ್ವಪತನ ಕಂಡಿತು.
ಭಾರತ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 3 ವಿಕೆಟ್ ಉರುಳಿಸಿದರೆ, ಜಸ್‌ಪ್ರೀತ್ ಬೂಮ್ರಾ ಮತ್ತು ಯಜುವೇಂದ್ರ ಚಾಹಲ್ ತಲಾ ಎರಡು ವಿಕೆಟ್ ಕಿತ್ತರು. ಉಳೆದೆರಡು ವಿಕೆಟ್‌ಗಳನ್ನು ಹರ್ಷಲ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.