ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ರೂಡಿ ಕರ್ಟ್‌ಜನ್ ಅವರು ಮಂಗಳವಾರ ಬೆಳಗ್ಗೆ ರಿವರ್ಸ್‌ಡೇಲ್ ಎಂಬ ಪಟ್ಟಣದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸುದ್ದಿತಾಣ ವರದಿ ಮಾಡಿದೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು.
ಕರ್ಟ್‌ಜನ್ ಅವರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
1990 ರಿಂದ 2010 ದಶಕದ ವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ಅಂಪೈರ್‌ಗಳು ಎನಿಸಿಕೊಂಡವರಲ್ಲಿ ಕರ್ಟ್‌ಜನ್ ಕೂಡ ಒಬ್ಬರಾಗಿದ್ದರು. ಸುಮಾರು 400 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಅವರು ಕಾರ್ಯನಿರ್ವಹಿಸಿದ್ದರು.
‘ವಿಶ್ವಪ್ರಸಿದ್ಧ ಕ್ರಿಕೆಟ್ ಅಂಪೈರ್, ರೂಡಿ ಕರ್ಟ್‌ಜನ್ ಮತ್ತು ಇತರ ಮೂವರು ಮಂಗಳವಾರ ಬೆಳಿಗ್ಗೆ ರಿವರ್ಸ್‌ಡೇಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೇಪ್‌ಟೌನ್‌ನಲ್ಲಿ ನಡೆದಿದ್ದ ವಾರಾಂತ್ಯದ ಗಾಲ್ಫ್‌ನಲ್ಲಿ ಭಾಗವಹಿಸಿ ಅವರು ಮನೆಗೆ ಹಿಂದಿರುಗುತ್ತಿದ್ದರು’ ಎಂದು ‘ಅಲ್ಗೋವಾ’ ಎಫ್‌ಎಂ ನ್ಯೂಸ್ ವರದಿ ಮಾಡಿದೆ.
ರೂಡಿ ಕರ್ಟ್‌ಜನ್ ಅವರ ಪುತ್ರ ರೂಡಿ ಕರ್ಟ್‌ಜನ್ ಜೂನಿಯರ್ ಅವರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ.
‘ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ಗಾಲ್ಫ್ ಪಂದ್ಯಾವಳಿಗೆ ಹೋಗಿದ್ದರು. ಸೋಮವಾರ ಹಿಂತಿರುಗುವ ನಿರೀಕ್ಷೆ ಇತ್ತು’ ಎಂದು ಕರ್ಟ್‌ಜನ್ ಜೂನಿಯರ್ ಅವರು ವೆಬ್‌ಸೈಟ್‌ಗೆ ತಿಳಿಸಿದರು.
ಕರ್ಟ್‌ಜನ್ ಅವರು 2002ರಲ್ಲಿ ಐಸಿಸಿಯ ಎಲೈಟ್ ಪ್ಯಾನೆಲ್‌ಗೆ (ಅತ್ಯುನ್ನತ ಸಮಿತಿ) ಸೇರ್ಪಡೆಗೊಂಡಿದ್ದರು. ಎಂಟು ವರ್ಷಗಳ ಕಾಲ ಅದರ ಭಾಗವಾಗಿದ್ದರು.
128 ಟೆಸ್ಟ್, 250 ಏಕದಿನ ಪಂದ್ಯಗಳು ಮತ್ತು 19 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಂತೆ 397 ಪಂದ್ಯಗಳಲ್ಲಿ ಆನ್-ಫೀಲ್ಡ್ ಮತ್ತು ಟಿವಿ ಅಂಪೈರ್ ಆಗಿ ರೂಡಿ ಕರ್ಟ್‌ಜನ್ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.