ಬೆಂಗಳೂರು: ದಾವಣಗೆರೆ, ಹಾಸನ, ಗದಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕ್ರಿಕೆಟ್ ಅಂಗಣಗಳನ್ನು ನಿರ್ಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಕೊಡಗು ಮತ್ತು ಕೋಲಾರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಸ್ವಾದೀನ ಕಾರ್ಯ ಮುಕ್ತಾಯವಾಗಿದೆ ಎಂದು ವಿವರಿಸಿದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸುವ ಟೂರ್ನಿಗಳಿಗೆ ಸಂಬಂಧಿಸಿದ ಕನಿಷ್ಠ ಒಂದು ಪಂದ್ಯವನ್ನು ಹೊಸ ಕ್ರೀಡಾಂಗಣಗಳಲ್ಲಿ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕದ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷ ರೋಜರ್ ಬಿನ್ನಿ, ಐಪಿಎಲ್‌ನ 15ನೇ ಆವೃತ್ತಿಯಲ್ಲಿ ರಾಜ್ಯದ 15 ಮಂದಿ ಆಟಗಾರರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಯಾವುದೇ ರಾಜ್ಯದ ಕ್ರಿಕೆಟ್ ಸಂಸ್ಥೆಯಿಂದ ಇಷ್ಟು ಸಂಖ್ಯೆಯ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿಲ್ಲ’ ಎಂದರು.
ಸಮಿತ್, ಮನೀಷ್‌ಗೆ ಪ್ರಶಸ್ತಿ
ಭಾರತ ತಂಡದ ಮಾಜಿ ನಾಯಕ ಮತ್ತು ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಹಾಗೂ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರು ವಾರ್ಷಿಕ ಪ್ರಶಸ್ತಿಗಳನ್ನು ಗಳಿಸಿದವರಲ್ಲಿ ಪ್ರಮುಖರು. ಕೋವಿಡ್–19ರಿಂದಾಗಿ ಮೂರು ವರ್ಷಗಳ ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಮಲ್ಯ ಅದಿತಿ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯಾಗಿರುವ ಸಮಿತ್ ಅವರು ಬಿ.ಟಿ.ರಾಮಯ್ಯ ಶೀಲ್ಡ್‌ಗಾಗಿ ನಡೆದ 14 ವರ್ಷದೊಳಗಿನವರ ಎರಡನೇ ಡಿವಿಷನ್ ಲೀಗ್ ಟೂರ್ನಿಯ 2019–20ನೇ ಋತುವಿನಲ್ಲಿ ಹೆಚ್ಚು ರನ್ ಗಳಿಸಿದ್ದರು. ಮನೀಷ್ ಪಾಂಡೆ ಕಳೆದ ವರ್ಷ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ್ದರು. ಆರ್.ಸಮರ್ಥ್ (2021–22ರ ವಿಜಯ್ ಹಜಾರೆ ಟ್ರೋಫಿ), ದೇವದತ್ತ ಪಡಿಕ್ಕಲ್ (2020–21ರ ವಿಜಯ್ ಹಜಾರೆ, ಮುಷ್ತಾಕ್ ಅಲಿ ಟ್ರೋಫಿ) ಪ್ರಶಸ್ತಿಗೆ ಪಾತ್ರರಾದ ಇತರ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.