ಮ್ಯಾಂಚೆಸ್ಟರ್: ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಐದನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು. ಬುಧವಾರ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ದಾಖಲಿಸಿದರು.
ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (688) ಮತ್ತು ಭಾರತದ ಅನಿಲ್ ಕುಂಬ್ಳೆ (619) ಅವರು ಮಾತ್ರ 600ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. 40 ವರ್ಷದ ಆ್ಯಂಡರ್ಸನ್ ಮತ್ತು 37 ವರ್ಷದ ಬ್ರಾಡ್ ಅವರು ಈಗಲೂ ಸಕ್ರಿಯ ಆಟಗಾರರಾಗಿದ್ದಾರೆ. ಮಾತ್ರವಲ್ಲ, ಇವರಿಬ್ಬರು ಮಾತ್ರ ಈ ‘600+ ಕ್ಲಬ್’ನಲ್ಲಿರುವ ವೇಗದ ಬೌಲರ್‌ಗಳೆನಿಸಿದ್ದಾರೆ.
ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಆಸ್ಟ್ರೇಲಿಯಾ 73 ಓವರುಗಳ ಆಟದ ಬಳಿಕ 7 ವಿಕೆಟ್‌ಗೆ 277 ರನ್ ಗಳಿಸಿದೆ. 61 ರನ್‌ಗಳಾಗುಷ್ಟರಲ್ಲಿ ಆರಂಭ ಆಟಗಾರರಿಬ್ಬರನ್ನು ಕಳೆದುಕೊಂಡ ಆಸ್ಟ್ರೇಲಿಯಾಕ್ಕೆ ಮಾರ್ನಸ್ ಲಾಬುಷೇನ್ (51) ಮತ್ತು ಸ್ಟೀವನ್ ಸ್ಮಿತ್ (41) ಅವರು ಮೂರನೇ ವಿಕೆಟ್‌ಗೆ 122 ರನ್ ಸೇರಿಸಿ ಚೇತರಿಕೆ ನೀಡಿದರು. ಟ್ರಾವಿಸ್ ಹೆಡ್ (48) ಮತ್ತು ಮಿಚೆಲ್ ಮಾರ್ಷ್ 51 (60 ಎಸೆತ) ಅವರೂ ವೇಗವಾಗಿ ರನ್ ಗಳಿಸಿದರು. ಸ್ಟುವರ್ಟ್ ಬ್ರಾಡ್ (68ಕ್ಕೆ2) ಮತ್ತು ಕ್ರಿಸ್ ವೋಕ್ಸ್ (49ಕ್ಕೆ3) ಯಶಸ್ವಿ ಬೌಲರ್‌ಗಳೆನಿಸಿದರು.
ಇದು ಬ್ರಾಡ್ ಅವರಿಗೆ 166ನೇ ಟೆಸ್ಟ್ ಆಗಿದ್ದು, ಈ ಪಂದ್ಯಕ್ಕೆ ಮೊದಲು 598 ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯಾದ ಆರಂಭ ಆಟಗಾರ ಉಸ್ಮಾನ್ ಖ್ವಾಜಾ ಅವರ ವಿಕೆಟ್ ಕೂಡ ಬ್ರಾಡ್ ಪಾಲಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಅವರು 150 ವಿಕೆಟ್ ಪಡೆಯುವ ಮೂಲಕ ಇಯಾನ್ ಬೋಥಂ ಅವರನ್ನು ಹಿಂದೆಹಾಕಿದರು. ಶ್ರೀಲಂಕಾ ವಿರುದ್ಧ 2007ರಲ್ಲಿ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಮೂರು ಬಾರಿ ಅವರು 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.