ADVERTISEMENT

IPL 2024 | ವೈಫಲ್ಯಗಳ ದಾಟಿದ ಅಯ್ಯರ್‌ಗೆ ಪ್ರಶಸ್ತಿಯ ಶ್ರೇಯ

ಪಿಟಿಐ
Published 27 ಮೇ 2024, 19:30 IST
Last Updated 27 ಮೇ 2024, 19:30 IST
<div class="paragraphs"><p>ಶ್ರೇಯಸ್‌ ಅಯ್ಯರ್‌ </p></div>

ಶ್ರೇಯಸ್‌ ಅಯ್ಯರ್‌

   

ಪಿಟಿಐ ಚಿತ್ರ

ಕೋಲ್ಕತ್ತ: ಕಳೆದ ಸಲ ಫಿಫಾ ವಿಶ್ವಕಪ್ ಜಯಿಸಿದ್ದ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರು ಕಪ್‌ ಸ್ವೀಕರಿಸಿದ ನಂತರ ಮಾಡಿದ್ದ ಸಂಭ್ರಮಾಚರಣೆಯು ಗಮನ ಸೆಳೆದಿತ್ತು. ಅದೇ ಶೈಲಿಯ ‘ವಿಜಯೋತ್ಸವದ ಹೆಜ್ಜೆ‘ಗಳನ್ನು ಭಾನುವಾರ ರಾತ್ರಿ ಚೆನ್ನೈನಲ್ಲಿ ಐಪಿಎಲ್ ಟ್ರೋಫಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಪ್ರದರ್ಶಿಸಿದರು. 

ADVERTISEMENT

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಅಯ್ಯರ್ ಬಳಗವು 8 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಸುಲಭ ಜಯ ಸಾಧಿಸಿತು. ಈ ಜಯವು ಶ್ರೇಯಸ್ ಪಾಲಿಗೆ ದೊಡ್ಡ ಸಾಧನೆಯೇ ಸರಿ. 

ಏಕೆಂದರೆ; ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದ ಸಂದರ್ಭದಲ್ಲಿ ಅಯ್ಯರ್ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಡಲಾಗಿತ್ತು. ಅಲ್ಲದೇ ಬೆನ್ನುಹುರಿಯ ಗಾಯದಿಂದಲೂ ಅವರು ಬಹಳಷ್ಟು ಬಳಲಿದ್ದರು. ಅವರ ವೃತ್ತಿಜೀವನವು ಡೋಲಾಯಮಾನವಾದ ಸ್ಥಿತಿ ಅದಾಗಿತ್ತು. ಶ್ರೇಯಸ್ ವೈಫಲ್ಯ ಮತ್ತು ನಿರಾಶೆಗಳಿಂದ ಎದ್ದುಬಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. 

ಈ ಹಿಂದೆ ಎರಡು ಬಾರಿ ಚಾಂಪಿಯನ್ ಆಗಿದ್ದ ತಂಡವು ಹತ್ತು ವರ್ಷದ ನಂತರ ಮತ್ತೆ ಪ್ರಶಸ್ತಿ ಗೆದ್ದಿತು.  

‘ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನು ಕೇಳುತ್ತಿದ್ದೇನೆ. ಆದರೆ ಆ ವ್ಯಕ್ತಿಗೆ (ಶ್ರೇಯಸ್‌)ಗೆ ಸಿಗಬೇಕಾದಷ್ಟು ಶ್ರೇಯ ಸಿಗುತ್ತಿಲ್ಲ. ಅವರಿಗೂ ಈ ಜಯದ ಹೆಗ್ಗಳಿಕೆ ಸಿಗಲೇಬೇಕು’ ಎಂದು ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್ ಪಂದ್ಯದ ನಂತರ ಹೇಳಿದ್ದರು. 

ಪಂದ್ಯಗಳಲ್ಲಿ ಕೆಕೆಆರ್ ತಂಡಕ್ಕೆ ಸುನಿಲ್ ನಾರಾಯಣ್ ಮತ್ತು ಫಿಲ್ ಸಾಲ್ಟ್ ಅವರು ಉತ್ತಮ ಆರಂಭ ನೀಡಿದ್ದರು. ಆದರೆ ತಂಡದ ಸಾಂಘಿಕ ಪ್ರಯತ್ನ ದೊಡ್ಡದು. ಅದರಿಂದಲೇ  ಸ್ಪರ್ಧಾತ್ಮಕ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. 

ಐಪಿಎಲ್‌ ಪ್ರಶಸ್ತಿ ಗೆದ್ದ ಕೆಕೆಆರ್ ತಂಡ

‘ನಮಗೆ ಈಗ ಹೇಗೆ ಅನಿಸುತ್ತಿದೆ ಎಂಬುದನ್ನು ವ್ಯಕ್ತಪಡಿಸುವುದು ಬಹಳ ಕಷ್ಟ. ಈ ಪ್ರಶಸ್ತಿಗಾಗಿ ದೀರ್ಘ ಸಮಯದಿಂದ ಕಾದಿದ್ದೆವು. ಇಡೀ ಟೂರ್ನಿಯಲ್ಲಿ ಸೋಲರಿಯದಂತೆ ಆಡಿದೆವು. ಅದರ ಫಲವಾಗಿ ಈಗ ಸಂಭ್ರಮಿಸುತ್ತಿದ್ಧೇವೆ’ ಎಂದು ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಹೇಳಿದರು. 

ಹೋದ ವರ್ಷದ  ಐಪಿಎಲ್‌ನಲ್ಲಿ ಶ್ರೇಯಸ್ ಆಡಿರಲಿಲ್ಲ. ಆ ಸಂದರ್ಭದಲ್ಲಿ ಅವರು ಶಸ್ತ್ರಚಿಕಿತ್ಸೆಗಾಗಿ ಲಂಡನ್‌ನಲ್ಲಿದ್ದರು.  ಮುಂಬೈನ ಶ್ರೇಯಸ್ ಏಷ್ಯಾ ಕಪ್ ಟೂರ್ನಿಯಲ್ಲಿ ಮತ್ತೆ ಕಣಕ್ಕಿಳಿದಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಮನ ಸೆಳೆದಿದ್ದರು. 

ವಿಶ್ವಕಪ್ ಫೈನಲ್‌ನಲ್ಲಿ ಶ್ರೇಯಸ್ ಇದ್ದ ಭಾರತ ತಂಡವನ್ನು ಸೋಲಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್‌ ನಾಯಕರಾಗಿದ್ದರು. ಇದೀಗ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಬಳಗವನ್ನು ಶ್ರೇಯಸ್ ಪಡೆಯು ಮಣಿಸಿತು.  

‘ಐಪಿಎಲ್‌ ಶ್ರೇಷ್ಠ ಎಸೆತ‘

ಚೆನ್ನೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್ ಅವರ ಎಸೆತವನ್ನು ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮ್ಯಾಥ್ಯೂ ಹೇಡನ್ ಅವರು ‘ಐಪಿಎಲ್ ಟೂರ್ನಿಯ ಎಸೆತ’ವೆಂದು ಶ್ಲಾಘಿಸಿದ್ದಾರೆ.

‘ಸ್ಟಾರ್ಕ್ ಹಾಕಿದ ಆ ಎಸೆತದಲ್ಲಿ ಅಭಿಷೇಕ್ ಶರ್ಮಾ ಔಟಾಗುವುದರೊಂದಿಗೆ ಸನ್‌ರೈಸರ್ಸ್‌ಗೆ ಪಂದ್ಯ ಮುಗಿದಂತಾಗಿತ್ತು. ಅದು ಐಪಿಎಲ್‌ನಲ್ಲಿಯೇ ಅತ್ಯಂತ ಶ್ರೇಷ್ಠ ಎಸೆತ’ ಎಂದು ಹೇಡನ್ ಬಣ್ಣಿಸಿದರು.

‘ಸ್ಟಾರ್ಕ್ 136 –137 ಕಿ.ಮೀ ವೇಗದಲ್ಲಿ ‌ಎಸೆತ ಹಾಕುತ್ತಾರೆ. ಆದರೆ ಕಳೆದ ಎರಡು ವಾರಗಳಲ್ಲಿ ಅವರ ಎಸೆತಗಳ ವೇಗವು 140 ಕಿ.ಮೀ ದಾಟಿದೆ. ಅವರ ಮಣಿಕಟ್ಟಿನ ಚಲನೆ ವಿಶೇಷವಾಗಿತ್ತು. ಈ ಟೂರ್ನಿಯಲ್ಲಿ ಅವರು ಹೆಚ್ಚು ಸ್ವಿಂಗ್ ಮಾಡುವುದನ್ನು ನೋಡಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಅವರ ಎಸೆತಗಳು ಪರಿಣಾಮಕಾರಿಯಾಗಿವೆ’ ಎಂದು ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಕ್ರೀಡಾಂಗಣ ಸಿಬ್ಬಂದಿಗೆ ನಗದು ಪುರಸ್ಕಾರ

ನವದೆಹಲಿ: ಐಪಿಎಲ್ ಪಂದ್ಯಗಳು ನೆಡೆದ ಎಲ್ಲ ಕ್ರೀಡಾಂಗಣಗಳ ಮೈದಾನ ಸಿಬ್ಬಂದಿಗೆ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ಪ್ರತಿವರ್ಷ ಐಪಿಎಲ್ ನಡೆಯುವ ಹತ್ತು ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ ₹ 25 ಲಕ್ಷ ಹಾಗೂ ಹೆಚ್ಚುವರಿ ತಾಣಗಳ ಸಿಬ್ಬಂದಿಗೆ ತಲಾ ₹ 10 ಲಕ್ಷ ನೀಡಲಾಗುವುದು ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ‘ಎಕ್ಸ್‌’ ಸಂದೇಶ ಹಾಕಿದ್ದಾರೆ.

‘ಎರಡು ತಿಂಗಳುಗಳ ಕಾಲ ಐಪಿಎಲ್ ಟೂರ್ನಿಯ ಪಂದ್ಯಗಳು ಅದ್ದೂರಿಯಾಗಿ ನಡೆಯಲು ಕಾರಣವಾದ ತೆರೆಮರೆಯ ರೂವಾರಿಗಳು ಇವರು. ಮೈದಾನ ಸಿಬ್ಬಂದಿಗಳ ಸೇವೆಯನ್ನು ಗುರುತಿಸುವುದು ನಮ್ಮ ಕರ್ತವ್ಯ’ ಎಂದಿದ್ದಾರೆ.

ಮುಂಬೈ ಡೆಲ್ಲಿ ಚೆನ್ನೈ ಕೋಲ್ಕತ್ತ ಚಂಡೀಗಡ ಹೈದರಾಬಾದ್ ಬೆಂಗಳೂರು ಲಖನೌ ಅಹಮದಾಬಾದ್ ಹಾಗೂ ಜೈಪುರ ಕ್ರೀಡಾಂಗಣ ಸಿಬ್ಬಂದಿಗೆ ₹ 25 ಲಕ್ಷ ಘೋಷಿಸಲಾಗಿದೆ. ಗುವಾಹಟಿ ವಿಶಾಖಪಟ್ಟಣ ಹಾಗೂ ಧರ್ಮಶಾಲಾ ಮೈದಾನ ಸಿಬ್ಬಂದಿಗೆ ತಲಾ ₹ 10 ಲಕ್ಷ ನೀಡಲಾಗುವುದು.

‘ಈ ಬಾರಿಯ ಟೂರ್ನಿಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಹಾಗೂ ಪ್ರತಿ ಪಂದ್ಯಕ್ಕೂ ಕಿಕ್ಕಿರಿದು ಸೇರಿ ಪ್ರೋತ್ಸಾಹಿಸಿದ ಲಕ್ಷಾಂತರ ಪ್ರೇಕ್ಷಕರಿಗೆ ಆಭಾರಿಯಾಗಿದ್ದೇವೆ’ ಎಂದೂ ಶಾ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.