ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೆಗಾ ಹರಾಜಿಗೆ ವೇದಿಕೆ ಸಿದ್ಧಗೊಂಡಿದೆ. ಇದರೊಂದಿಗೆ ಎಲ್ಲ 10 ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.
ಹರಾಜಿಗೆ ಹೋಗುವ ಮುನ್ನ ಸಾಕಷ್ಟು ಲೆಕ್ಕಾಚಾರಗಳನ್ನು ಮಾಡಿ ಪ್ರತಿಯೊಂದು ತಂಡಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿವೆ. ಉಳಿದ ಆಟಗಾರರನ್ನು ಬಿಡ್‌ಗೆ ಬಿಡುಗಡೆ ಮಾಡಿವೆ.
ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರರ ಪಟ್ಟಿ ಇಲ್ಲಿದೆ.
ಐಪಿಎಲ್ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಸನ್‌ರೈಸರ್ಸ್ ಹೈದಾರಾಬಾದ್ ತಂಡದ ಆಟಗಾರ ಹೆನ್ರಿಚ್ ಕ್ಲಾಸೆಲ್ ಗರಿಷ್ಠ ₹23 ಕೋಟಿ ಗಳಿಸಿದ್ದಾರೆ. ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಹೊಂದಿರುವ ಕ್ಲಾಸನ್ ಅವರನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಎಸ್‌ಆರ್‌ಎಚ್ ಫ್ರಾಂಚೈಸಿ ನಿರ್ಧರಿಸಿದೆ.
ಆ ಮೂಲಕ ಹೆನ್ರಿಚ್ ಕ್ಲಾಸನ್, ಐಪಿಎಲ್ ಇತಿಹಾಸದಲ್ಲೇ ಹರಾಜಿಗೂ ಮುನ್ನ ತಂಡಗಳು ಉಳಿಸಿಕೊಂಡ ಆಟಗಾರರ ಪೈಕಿ ಅತಿ ಹೆಚ್ಚು ಗಳಿಕೆ ಪಡೆದ ಆಟಗಾರ ಎನಿಸಿದ್ದಾರೆ.
ಈ ಪೈಕಿ ಆರ್‌ಸಿಬಿ ತಂಡವು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ₹21 ಕೋಟಿ ನೀಡಿದೆ. ಆ ಮೂಲಕ ಈ ಸಲ ವಿರಾಟ್ ಹೆಗಲಿಗೆ ನಾಯಕತ್ವ ಹೊಣೆ ನೀಡುವ ಸೂಚನೆಯನ್ನು ನೀಡಿದೆ.
ನಿಕೋಲಸ್ ಪೂರನ್ (ಎಲ್‌ಎಸ್‌ಜಿ): ₹21 ಕೋಟಿ
ಮತ್ತೊಂದೆಡೆ ಅಚ್ಚರಿಯೆಂಬಂತೆ ₹21 ಕೋಟಿ ಪಡೆಯುವಲ್ಲಿ ವೆಸ್ಟ್‌ಇಂಡೀಸ್‌ನ ಆಟಗಾರ ನಿಕೋಲಸ್ ಪೂರನ್ ಯಶಸ್ವಿಯಾಗಿದ್ದಾರೆ. ಆ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡವು ಪೂರನ್ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸಿದೆ.
ಇನ್ನು ಆರು ಮಂದಿ ಆಟಗಾರರು ತಲಾ ₹18 ಕೋಟಿ ಪಡೆದಿದ್ದಾರೆ. ಆ ಮೂಲಕ ಟಾಪ್ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್, ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ರಾಯಲ್ಸ್, ರಶೀದ್ ಖಾನ್ ಅವರನ್ನು ಗುಜರಾತ್ ಟೈಟನ್ಸ್, ಜಸ್‌ಪ್ರೀತ್ ಬೂಮ್ರಾ ಅವರನ್ನು ಮುಂಬೈ ಇಂಡಿಯನ್ಸ್ ಮತ್ತು ಋತುರಾಜ್ ಗಾಯಕವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಬಳಿಯೇ ಉಳಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.