ADVERTISEMENT

ತಮ್ಮ ಆಯ್ಕೆಯ ನೆರವು ಸಿಬ್ಬಂದಿ ಪಡೆಯುವತ್ತ ಗಂಭೀರ್‌ ಚಿತ್ತ

ಪಿಟಿಐ
Published 11 ಜುಲೈ 2024, 0:12 IST
Last Updated 11 ಜುಲೈ 2024, 0:12 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಗೌತಮ್ ಗಂಭೀರ್ ಅವರು, ಮುಂದಿನ ಮೂರು ವರ್ಷಗಳ ಅಧಿಕಾರಾವಧಿಯ ಸವಾಲುಗಳಿಗೆ ಸಿದ್ಧರಾಗಲು ತಮ್ಮ ಆಯ್ಕೆಯ ನೆರವು ಸಿಬ್ಬಂದಿಯನ್ನು ಪಡೆಯುವತ್ತ ಗಮನ ಹರಿಸುತ್ತಿದ್ದಾರೆ. 

ಗಂಭೀರ್‌ ಅವರನ್ನು ಮುಖ್ಯ ಕೋಚ್‌ ಆಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಂಗಳವಾರ ಪ್ರಕಟಿಸಿದ್ದರು. ಆದರೆ, ಗಂಭೀರ್‌ ಅವರ ವೇತನ ಶ್ರೇಣಿ ಇನ್ನೂ ಅಂತಿಮವಾಗಿಲ್ಲ. ಆದರೂ ಹಿಂದಿನ ಕೋಚ್‌ಗಳಾದ ರಾಹುಲ್‌ ದ್ರಾವಿಡ್‌ ಮತ್ತು ರವಿಶಾಸ್ತ್ರಿ ಅವರ ಶ್ರೇಣಿಯಲ್ಲೇ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಗಂಭೀರ್‌ ಅವರಿಗೆ ತಮ್ಮದೇ ನೆರವು ಸಿಬ್ಬಂದಿಯ ತಂಡವನ್ನು ಕಟ್ಟಲು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೋಚ್‌ ವಿ.ವಿ.ಎಸ್‌. ಲಕ್ಷ್ಮಣ್‌ ಜೊತೆ ನಿಕಟವಾಗಿ ಸಮನ್ವಯ ಸಾಧಿಸಲಿದ್ದಾರೆ. ಲಕ್ಷ್ಮಣ್‌ ಅವರು ಪ್ರಸ್ತುತ ಭಾರತ ಯುವ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸದಲ್ಲಿದ್ದಾರೆ. ಅವರು ವಾಪಸಾದ ಬಳಿಕ ಗಂಭೀರ್‌, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌, ತಂಡದ ಇಬ್ಬರು ನಾಯಕರಾದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಚರ್ಚೆ ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಈ ಮಧ್ಯೆ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗರಾದ ಲಕ್ಷ್ಮಿಪತಿ ಬಾಲಾಜಿ ಮತ್ತು ಜಹೀರ್ ಖಾನ್ ಅವರ ಹೆಸರು ಮುಂಚೂಣಿಗೆ ಬಂದಿವೆ. ಕರ್ನಾಟಕದ ಆರ್‌. ವಿನಯಕುಮಾರ್‌ ಅವರೂ ಚಾಲ್ತಿಯಲ್ಲಿದ್ದು, ಇದು ಗಂಭೀರ್ ಅವರ ಆಯ್ಕೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.