ADVERTISEMENT

2024ರ ಟಿ20 ವಿಶ್ವಕಪ್‌ವರೆಗೂ ರೋಹಿತ್ ನಾಯಕರಾಗಿ ಮುಂದುವರಿಯಬೇಕು: ಗಂಗೂಲಿ

ಪಿಟಿಐ
Published 1 ಡಿಸೆಂಬರ್ 2023, 10:57 IST
Last Updated 1 ಡಿಸೆಂಬರ್ 2023, 10:57 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಕೋಲ್ಕತ್ತ: ಈಗಷ್ಟೇ ಅಂತ್ಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೀತಿಯಿಂದ ಪ್ರಭಾವಿತರಾಗಿರುವ ಮಾಜಿ ಕಪ್ತಾನ ಸೌರವ್ ಗಂಗೂಲಿ, ಕನಿಷ್ಠ 2024ರ ಟ್ವೆಂಟಿ-20 ವಿಶ್ವಕಪ್‌ವರೆಗೂ ರೋಹಿತ್ ಅವರೇ ಭಾರತ ತಂಡದ ನಾಯಕರಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ.

ADVERTISEMENT

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸತತ 10 ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.

ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್ ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ. ಎಲ್ಲ ಮಾದರಿಯಲ್ಲೂ ತಂಡಕ್ಕೆ ಹಿಂತಿರುಗಿದ ಬಳಿಕ ರೋಹಿತ್ ಅವರೇ ತಂಡವನ್ನು ಮುನ್ನಡೆಸಬೇಕು ಎಂದು ಗಂಗೂಲಿ ಹೇಳಿದ್ದಾರೆ.

ದ್ವಿಪಕ್ಷೀಯ ಟೂರ್ನಿಗಿಂತ ವಿಶ್ವಕಪ್ ಭಿನ್ನವಾಗಿದ್ದು, ಒತ್ತಡ ಬೇರೆಯದ್ದೇ ಆಗಿರುತ್ತದೆ. ಈ ವಿಶ್ವಕಪ್‌ನಲ್ಲಿ ಅಸಾಧಾರಣವಾಗಿ ಆಡಿದ್ದಾರೆ. ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ಗೆ 6-7 ತಿಂಗಳುಗಳಿದ್ದು, ಮತ್ತೆ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ರೋಹಿತ್ 2024ರ ವಿಶ್ವಕಪ್ ವರೆಗೆ ನಾಯಕರಾಗಿ ಮುಂದುವರಿಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ ಸೋಲಿನ ಬಳಿಕ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಚುಟುಕು ಪ್ರಕಾರದಲ್ಲಿ ಆಡಿರಲಿಲ್ಲ. ಆ ಬಳಿಕದ ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು. ಆದರೆ ಈಗ ಹಾರ್ದಿಕ್ ಗಾಯಗೊಂಡ ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸೂರ್ಯಕುಮಾರ್ ಅವರಿಗೆ ಕಪ್ತಾನಗಿರಿ ವಹಿಸಿಕೊಡಲಾಗಿದೆ.

ವಿಶ್ರಾಂತಿ ಬಯಸಿರುವ ರೋಹಿತ್ ಹಾಗೂ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುತ್ತಿಲ್ಲ. ಟೆಸ್ಟ್ ಸರಣಿಯ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದ್ರಾವಿಡ್ ಬಗ್ಗೆ ಸಂತೋಷವಿದೆ: ದಾದಾ...

ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಒಪ್ಪಂದವನ್ನು ಬಿಸಿಸಿಐ ವಿಸ್ತರಿಸಿದೆ. ಈ ಕುರಿತು ಸೌರವ್ ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ನಾನು ಅಚ್ಚರಿಗೊಂಡಿಲ್ಲ. ದ್ರಾವಿಡ್ ಮೇಲೆ ಬಿಸಿಸಿಐ ನಂಬಿಕೆಯನ್ನಿರಿಸಿಕೊಂಡಿದೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಅವರ ಮನವೊಲಿಸಿದ್ದೆ. ಅವರ ನೇತೃತ್ವದಲ್ಲಿ ಮುಂದಿನ ವರ್ಷ ಭಾರತ ಟಿ20 ವಿಶ್ವಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.