ಮುಂಬೈ: ಬಿಸಿಸಿಐನ ಅಧ್ಯಕ್ಷ ಸ್ಥಾನದ ಬಗ್ಗೆ ಈಗ ಚರ್ಚೆ ಜೋರಾಗಿದೆ.ಕರ್ನಾಟಕದ ಹಿರಿಯ ಕ್ರಿಕೆಟಿಗ ಮತ್ತು ಆಡಳಿತಗಾರ ಬ್ರಿಜೇಶ್ ಪಟೇಲ್ ಅವರು ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸಮೀಪದಲ್ಲಿದ್ದಾರೆ ಎಂದು ವರದಿಯಾದ ಬೆನ್ನಲೇ ಸೌರವ್ ಗಂಗೂಲಿ ಹೆಸರು ಸಹ ಕೇಳಿ ಬಂದಿದೆ.
ಭಾನುವಾರದ ದಿಢೀರ್ ಬೆಳವಣಿಗೆಯೊಂದಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರು ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐನ ನೂತನ ಕಾರ್ಯದರ್ಶಿ ಹಾಗೂ ಅರುಣ್ ಧುಮಲ್ ನೂತನ ಖಜಾಂಚಿಯಾಗಲಿದ್ದಾರೆ. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ ಅರುಣ್ ಧುಮಲ್.
ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ. ಆದರೆ, ಈಗಾಗಲೇ ನಡೆದಿರುವ ಚರ್ಚೆ ಮತ್ತು ಲಾಬಿಯ ಪರಿಣಾಮ ಚುನಾವಣೆ ನಡೆಯದೆಯೇ ಅವಿರೋಧವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ(47) ನಿಯಮಗಳ ಪ್ರಕಾರ 2020ರ ಸೆಪ್ಟೆಂಬರ್‌ಗೆ ತಮ್ಮ ಸ್ಥಾನದಿಂದ ಹೊರಬರಬೇಕಾಗುತ್ತದೆ. ಉತ್ತಮ ಕ್ರಿಕೆಟಿಗನಾಗಿ ಹೆಸರು ಗಳಿಸಿರುವ ಸೌರವ್ ಗಂಗೂಲಿಗೆ ಆಡಳಿತಾತ್ಮಕ ವಿಚಾರಗಳಲ್ಲಿ ಜಗಮೋಹನ್ ದಾಲ್ಮಿಯಾ ಅವರು ಗುರು ಸ್ಥಾನದಲ್ಲಿದ್ದರು. ಗಂಗೂಲಿ ಅವರಿಂದ ಭಾರತೀಯ ಕ್ರಿಕೆಟ್ ರಂಗದಲ್ಲಿ ಹೊಸತೊಂದು ಬೆಳವಣಿಗೆಯ ನಿರೀಕ್ಷೆ ಇರಿಸಬಹುದಾಗಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸುವ ನಿರ್ಧಾರದ ಬಗ್ಗೆ ಗಂಗೂಲಿ ಒಪ್ಪಿಗೆ ಸೂಚಿಸಿರದಿದ್ದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಬೇರೆ ಅಭ್ಯರ್ಥಿಗಳ ಹುಡುಕಾಟ ನಡೆದಿತ್ತು. ಆದರೆ, ಹಲವು ರಾಜ್ಯ ಸಂಸ್ಥೆಗಳಿಂದ ಎದುರಾದ ವಿರೋಧಗಳ ಬಳಿಕ ನಾಟಕೀಯ ಬೆಳವಣಿಗೆಯ ಮೂಲಕ ಗಂಗೂಲಿ ಹೆಸರು ಮತ್ತೆ ಮುಂಚೂಣಿಯಲ್ಲಿದೆ.
‘ಎನ್.ಶ್ರೀನಿವಾಸನ್ ಅವರು ಬ್ರಿಜೇಶ್ ಪಟೇಲ್ ಪರವಾಗಿ ಲಾಬಿ ನಡೆಸಿದ್ದರು. ಆದರೆ, ಬಹುತೇಕರಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಸೌರವ್ ನೂತನ ಅಧ್ಯಕ್ಷರಾಗುತ್ತಿರುವುದು ಸಂತಸದ ವಿಚಾರ‘ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಮತ್ತು ಸೌರವ್ ಗಂಗೂಲಿ ಎರಡನೇ ಆಯ್ಕೆಗಳನ್ನು ಹೊಂದಲಾಗಿತ್ತು. ಅಂತಿಮವಾಗಿ ಗಂಗೂಲಿ ಅವಿರೋಧ ಅಭ್ಯರ್ಥಿಯಾಗಿ ಒಪ್ಪಿತರಾಗಿದ್ದಾರೆ. ಪಟೇಲ್ ಅವರು ಐಪಿಎಲ್ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.
ಬಿಸಿಸಿಐ ಸ್ಥಾನಗಳಿಗೆ ಆಯ್ಕೆಯಾಗುವ ನೂತನ ಆಡಳಿತಗಾರರು 33 ತಿಂಗಳ ವರೆಗೂ ಆಡಳಿತಾವಧಿ ಹೊಂದಿರುತ್ತಾರೆ. ಬಿಸಿಸಿಐನ ಒಂಬತ್ತು ಮಂದಿ ಸದಸ್ಯರ ಮಂಡಳಿಗೆ ಭಾರತ ಕ್ರಿಕೆಟ್ ಮಂಡಳಿ(ಐಸಿಎ) ಪ್ರತಿನಿಧಿಯಾಗಿ ಅನ್ಷುಮನ್ ಗಾಯಕವಾಡ್ ಆಯ್ಕೆಯಾಗಿದ್ದಾರೆ. ಶಾಂತಾ ರಂಗಸ್ವಾಮಿ ಅವರು ಐಸಿಎ ಮಹಿಳಾ ಪ್ರತಿನಿಧಿಯಾಗಿ ಈ ಹಿಂದೆ ಅವಿರೋಧವಾಗಿಯಾಗಿದ್ದರು.
ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸೌರವ್ ಗಂಗೂಲಿಗೆ ಅಭಿನಂದನೆ ಸಂದೇಶಗಳು ಪ್ರಕಟಗೊಂಡಿದ್ದು, ಅವರ ಸಾಧನೆಗಳನ್ನು ಅಭಿಮಾನಿಗಳು ಟ್ವೀಟ್‌ಗಳ ಮೆಲುಕು ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.