ಕೋಲ್ಕತ್ತ: ಲಘು ಹೃದಯಾಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಸೌರವ್ ಗಂಗೂಲಿ ಅವರು ಕೆಲವು ದಿನ ಅಥವಾ ವಾರಗಳ ನಂತರ ಇನ್ನೊಮ್ಮೆ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಬೇಕಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿರುವುದರಿಂದ ಆಸ್ಪತ್ರೆಯಿಂದ ಮನೆಗೆ ತೆರಳಬಹುದು ಎಂದೂ ಹೇಳಿದ್ದಾರೆ.
ಒಂಬತ್ತು ಸದಸ್ಯರ ಹಿರಿಯ ವೈದ್ಯರ ತಂಡವು ಸೋಮವಾರ ಗಂಗೂಲಿ ಆರೋಗ್ಯದ ಬಗ್ಗೆ ಸಮಾಲೋಚನೆ ನಡೆಸಿತು. ಅವರಿಗೆ ಆ್ಯಂಜಿಯೊಪ್ಲಾಸ್ಟಿ ಅಗತ್ಯವಿದ್ದರೂ, ಈಗ ಚೇತರಿಸಿರುವ ಕಾರಣ ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ತಂಡ ಒಮ್ಮತದ ನಿರ್ಧಾರಕ್ಕೆ ಬಂದಿದೆ.
‘ಹೃದ್ರೋಗ ತಜ್ಞರಾದ ಡಾ.ದೇವಿ ಶೆಟ್ಟಿ ಮತ್ತು ಡಾ.ಆರ್.ಕೆ.ಪಾಂಡಾ ಅವರು ಆನ್‌ಲೈನ್ ವೇದಿಕೆ ಮೂಲಕ ಚರ್ಚೆಯಲ್ಲಿ ಭಾಗಿಯಾದರು. ಅಮೆರಿಕದ ಮತ್ತೊಬ್ಬ ವೈದ್ಯಕೀಯ ತಜ್ಞೆ ದೂರವಾಣಿ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು‘ ಎಂದು ವೈದ್ಯಕೀಯ ತಂಡದ ಸದಸ್ಯೆ ರೂಪಾಲಿ ಬಸು ಹೇಳಿದ್ದಾರೆ.
‘ಕೆಲವು ದಿನಗಳು ಅಥವಾ ವಾರಗಳ ಬಳಿಕ ಆ್ಯಂಜಿಯೊಪ್ಲಾಸ್ಟಿ ನಡೆಸಲಾಗುವುದು. ಬಹುಶಃ ಅವರು ನಾಡಿದ್ದು ಡಿಸ್‌ಚಾರ್ಜ್ ಆಗಬಹುದು. ಅವರು ಡಿಸ್‌ಚಾರ್ಜ್ ಆದ ಬಳಿಕವೂ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ‘ ಎಂದು ರೂಪಾಲಿ ಹೇಳಿದರು.
ಡಾ.ದೇವಿ ಶೆಟ್ಟಿ ಅವರು ಮಂಗಳವಾರ ಗಂಗೂಲಿ ಅವರನ್ನು ಭೇಟಿಯಾಗಲಿದ್ದು, ಮುಂದಿನ ಚಿಕಿತ್ಸೆಯ ವೇಳೆ ಹಾಜರಿರಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 48 ವರ್ಷದ ಗಂಗೂಲಿ ಅವರಿಗೆ ಶನಿವಾರ ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಆಗಿತ್ತು. ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.