ADVERTISEMENT

ಭ್ರಷ್ಟಾಚಾರ ಮುಕ್ತ, ವಿಶ್ವಾಸಾರ್ಹ ಆಡಳಿತ: ಗಂಗೂಲಿ ಭರವಸೆ

ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ‘ದಾದಾ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:15 IST
Last Updated 23 ಅಕ್ಟೋಬರ್ 2019, 12:15 IST
   

ಮುಂಬೈ: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ನೂತನ ಆಧ್ಯಕ್ಷ ಸೌರವ್‌ ಗಂಗೂಲಿ ಭರವಸೆ ನೀಡಿದ್ದಾರೆ. ಭಾರತ ಕ್ರಿಕೆಟ್‌ ತಂಡವನ್ನು ಮುನ್ನಡೆಸಿದ ರೀತಿಯಲ್ಲೇ ಅತಿ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯಾದ ಬಿಸಿಸಿಐ ಆಡಳಿತವನ್ನೂ ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ.

ಬುಧವಾರ ಇಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ, ಮಂಡಳಿಯ 39ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ‘ವಿಶ್ವಾಸಾರ್ಹತೆ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ವಿಷಯದಲ್ಲೂ ಅಷ್ಟೇ. ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ರೀತಿಯೇ ಆಡಳಿತವನ್ನೂ ಉತ್ತಮವಾಗಿ ನಿರ್ವಹಿಸುತ್ತೇನೆ’ ಎಂದರು.

47 ವರ್ಷದ ಗಂಗೂಲಿ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು 9 ತಿಂಗಳು ಅಧಿಕಾರದಲ್ಲಿರುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಆದ್ಯತೆಗಳ ಬಗ್ಗೆ ಪಟ್ಟಿ ನೀಡಿದ ಅವರು, ‘ಗುರುವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಮಾತನಾಡುತ್ತೇನೆ. ಅವರಿಗೆ ಎಷ್ಟು ಸಾಧ್ಯವೊ ಅಷ್ಟು ಬೆಂಬಲ ನೀಡಲಾಗುವುದು. ಅವರ ಮನವಿಗಳಿಗೆ ಸ್ಪಂದಿಸಲಾಗುವುದು’ ಎಂದರು. ‘ಭಾರತ ಕ್ರಿಕೆಟ್‌ನಲ್ಲಿ ಕೊಹ್ಲಿ ಅತ್ಯಂತ ಪ್ರಮುಖ ವ್ಯಕ್ತಿ. ಅವರ ಮಾತನ್ನೂ ಆಲಿಸುತ್ತೇವೆ’ ಎಂದು ಹೇಳಿದರು.

ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಹಬ್ಬಿರುವ ವಂದತಿಗಳಿಗೆ ಸಂಬಂಧಿಸಿ ಮಾತನಾಡಿದ ಅವರು ‘ಚಾಂಪಿಯನ್ನರು ಬೇಗ ಮೂಲೆಗುಂಪಾಗುವುದಿಲ್ಲ. ನಾನು ಈ ಸ್ಥಾನದಲ್ಲಿರುವವರೆಗೆ, ಎಲ್ಲರಿಗೂ ಗೌರವ ದೊರೆಯಲಿದೆ’ ಎಂದು ಪ್ರತಿಕ್ರಿಯಿಸಿದರು. ಜುಲೈನಲ್ಲಿ ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದ ಸೋಲಿನ ನಂತರ ಧೋನಿ ‘ವಿಶ್ರಾಂತಿ’ಯಲ್ಲಿದ್ದಾರೆ.

ಎಡಗೈ ಆಟಗಾರರಾಗಿದ್ದ ಗಂಗೂಲಿ 2008ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು 16 ಶತಕಗಳು ಸೇರಿದಂತೆ 7,212 ರನ್‌ ಗಳಿಸಿದ್ದಾರೆ. ಅವರು ಲಾರ್ಡ್ಸ್‌ನಲ್ಲಿ ಆಡಿದ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.