ADVERTISEMENT

ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌
Published 9 ಜುಲೈ 2024, 18:26 IST
Last Updated 9 ಜುಲೈ 2024, 18:26 IST

ಗೌತಮ್ ಗಂಭೀರ್

ಗೌತಮ್ ಗಂಭೀರ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಿಸಿದ್ದಾರೆ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಕಳೆದ ತಿಂಗಳಿನಲ್ಲಿ ಟಿ20 ವಿಶ್ವಕಪ್‌ ಪ್ರಶಸ್ತಿ ಗೆದ್ದಾಗ ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌ ಆಗಿದ್ದರು. ಆ ವಿಶ್ವಕಪ್‌ ಟೂರ್ನಿಯೊಂದಿಗೆ ಅವರ ಗುತ್ತಿಗೆ ಅವಧಿಯೂ ಮುಕ್ತಾಯಗೊಂಡಿತ್ತು.

ADVERTISEMENT

ಟೀಮ್ ಇಂಡಿಯಾದಲ್ಲಿ ಎಡಗೈ ಓಪನಿಂಗ್ ಬ್ಯಾಟರ್ ಆಗಿದ್ದ ಗಂಭೀರ್, ಐಪಿಎಲ್‌ 2024ರ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತಂಡ ಈ ಬಾರಿಯ ಐಪಿಎಲ್ ಟ್ರೋಫಿ ಗೆದ್ದಿದೆ.

ಜಯ್ ಶಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಗೌತಮ್ ಗಂಭೀರ್ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದಿರುವ ಶಾ, ಭಾರತ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಸೂಕ್ತ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.

‘ಭಾರತ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅತೀವ ಸಂತಸದಿಂದ ಬರಮಾಡಿಕೊಳ್ಳುತ್ತೇನೆ. ಆಧುನಿಕ ಕ್ರಿಕೆಟ್ ವೇಗವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಬದಲಾವಣೆಯನ್ನು ಗಂಭೀರ್ ಹತ್ತಿರದಿಂದ ಕಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವು ಸವಾಲುಗಳನ್ನು ಕಂಡಿದ್ದಾರೆ. ಕೋಚ್ ಹುದ್ದೆಗೆ ಬಹುಬೇಡಿಕೆಯ ವ್ಯಕ್ತಿಯಾಗಿದ್ದಾರೆ. ಅವರ ಈ ಹೊಸ ಪಯಣಕ್ಕೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಹೇಳಿದ್ದಾರೆ.

ಎಡಗೈ ಆಟಗಾರರಾಗಿರುವ 42 ವರ್ಷ ವಯಸ್ಸಿನ ಗಂಭೀರ್ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಆಟಗಾರರಾಗಿದ್ದರು. ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ 2012, 2014ರಲ್ಲಿ ಪ್ರಶಸ್ತಿ ಗೆದ್ದಾಗ ಅವರು ನಾಯಕರಾಗಿದ್ದರು. ಈ ವರ್ಷ ಕೋಲ್ಕತ್ತದ ತಂಡ ಐಪಿಎಲ್‌ ಟ್ರೋಫಿ ಗೆದ್ದಾಗ ಅವರು ಮೆಂಟರ್ ಆಗಿದ್ದರು.

ಟೆಸ್ಟ್‌ ಪಂದ್ಯಗಳಲ್ಲಿ ಸತತವಾಗಿ ಐದು ಶತಕ ಗಳಿಸಿದ ನಾಲ್ವರು ಅಂತರರಾಷ್ಟ್ರೀಯ ಆಟಗಾರರಲ್ಲಿ ಗಂಭೀರ್ ಸಹ ಒಬ್ಬರು. ಡಾನ್‌ ಬ್ರಾಡ್ಮನ್‌, ಜಾಕ್ವೆಸ್‌ ಕಾಲಿಸ್‌ ಮತ್ತು ಮೊಹಮ್ಮದ್ ಯೂಸುಫ್‌ ಉಳಿದ ನಾಲ್ವರು.

ನಿವೃತ್ತಿ ನಂತರ ಅವರು, 2019ರಲ್ಲಿ ಪೂರ್ವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜಕೀಯ ತೊರೆದಿದ್ದು, ಮೆಂಟರ್‌ ಆಗಿ ಕೆಕೆಆರ್ ತಂಡಕ್ಕೆ ಮರಳಿದ್ದರು. ಕೆಲಸಮಯ ಹಿಂದೆ ಭಾರತ ತಂಡದ ಕೋಚ್‌ ಹುದ್ದೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೆಂಟರ್‌ ಹುದ್ದೆಯನ್ನೂ ತ್ಯಜಿಸಿದ್ದರು.

ಭಾರತ ತಂಡ, ಈ ತಿಂಗಳ ಅಂತ್ಯಕ್ಕೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಇದು ಗಂಭೀರ್ ಅವರಿಗೆ ಕೋಚ್‌ ಆಗಿ ಮೊದಲ ಜವಾಬ್ದಾರಿಯಾಗಲಿದೆ.ಯಶಸ್ಸಿನ ಉತ್ತುಂಗದಲ್ಲಿರುವಾಗ ಕೋಚಿಂಗ್ ಅವಧಿ ಪೂರೈಸಿದ ದ್ರಾವಿಡ್‌ ಅವರಿಗೆ ಜಯ್‌ ಶಾ ಅವರು ಇದೇ ವೇಳೆ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸಿದರು. ‘ಅವರ ಮಾರ್ಗದರ್ಶನದಡಿ ಭಾರತ ಟಿ20 ವಿಶ್ವಕಪ್‌ ಚಾಂಪಿಯನ್‌ ಪಟ್ಟ ಸೇರಿದಂತೆ ಎಲ್ಲ ಮಾದರಿಯಲ್ಲಿ ಪ್ರಬಲ ಶಕ್ತಿಯಾಗಿ ಹೊಮ್ಮಿದೆ’ ಎಂದು ಶಾ ಹೇಳಿದರು.

‘ಅವರ ಚತುರ ತಂತ್ರಗಾರಿಕೆ, ಪ್ರತಿಭೆಗಳನ್ನು ಬೆಳೆಸುವಲ್ಲಿ ಅವಿರತ ಪ್ರಯತ್ನ, ನಾಯಕತ್ವದ ಗುಣವು ತಂಡದೊಳಗೆ ಉತ್ಕೃಷ್ಟತೆಯ ಸಂಸ್ಕೃತಿಯನ್ನು ಬೆಳೆಸಿದೆ. ಇದು ಅವರು ಬಿಟ್ಟುಹೋಗಿರುವ ಪರಂಪರೆ’ ಎಂದು ಶ್ಲಾಘಿಸಿದ್ದಾರೆ.

ಟೀಮ್ ಇಂಡಿಯಾ ಕುರಿತಾಗಿ ಗಂಭೀರ್‌ ಅವರ ದೂರದೃಷ್ಟಿ, ಜೊತೆಗೆ ಅವರ ವ್ಯಾಪಕ ಅನುಭವದಿಂದಾಗಿ ಈ ಅತಿ ಮಹತ್ವದ ಹುದ್ದೆಗೆ ಅವರೇ ಪರಿಪೂರ್ಣ ಆಯ್ಕೆ ಎನಿಸಿದ್ದಾರೆ. ಈ ಹೊಸ ಪಯಣದಲ್ಲಿ ಬಿಸಿಸಿಐ ಅವರನ್ನು ಪೂರ್ಣವಾಗಿ ಬೆಂಬಲಿಸುತ್ತದೆ

ಜಯ್‌ ಶಾ, ಬಿಸಿಸಿಐ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.