ADVERTISEMENT

ಕ್ರಿಕೆಟ್: ಮುಖ್ಯ ಕೋಚ್ ಸ್ಥಾನಕ್ಕೆ ಗಂಭೀರ್ ಸಂದರ್ಶನ

ಮೊದಲ ಸುತ್ತಿನ ಪ್ರಕ್ರಿಯೆ ನಡೆಸಿದ ಸಿಎಸಿ

ಪಿಟಿಐ
Published 18 ಜೂನ್ 2024, 14:57 IST
Last Updated 18 ಜೂನ್ 2024, 14:57 IST
ಗೌತಮ್ ಗಂಭೀರ್ 
ಗೌತಮ್ ಗಂಭೀರ್    

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದ ಆಕಾಂಕ್ಷಿಯಾಗಿರುವ ಗೌತಮ್ ಗಂಭೀರ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮಂಗಳವಾರ ಸಂದರ್ಶನ ನಡೆಸಿತು. 

ಈ ಸಭೆಯು ಝೂಮ್ ಕಾಲ್ ಮೂಲಕ ನಡೆಯಿತು. ಗಂಭೀರ್ ಮತ್ತು ಸಿಎಸಿಯ ಮುಖ್ಯಸ್ಥ ಅಶೋಕ್ ಮಲ್ಹೋತ್ರಾ ಅವರು ವರ್ಚುವಲ್ ಆಗಿ ಹಾಜರಾಗಿದ್ದರು. 

‘ಹೌದು. ಗಂಭೀರ್ ಅವರು ಸಂದರ್ಶನಕ್ಕೆ ಹಾಜರಾಗಿದ್ದರು. ಒಂದು ಸುತ್ತಿನ ಚರ್ಚೆ ಇವತ್ತು ನಡೆಯಿತು. ನಾಳೆ ಇನ್ನೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ADVERTISEMENT

ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಕರೆದಾಗಿನಿಂದಲೂ ಗೌತಮ್ ಗಂಭೀರ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಅವರ ಆಯ್ಕೆಯು ಬಹುತೇಕ ಖಚಿತ ಎಂದೂ ಹೇಳಲಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಬಿಸಿಸಿಐ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ. ಸಿಎಸಿಯು ಎಲ್ಲ ಅಭ್ಯರ್ಥಿಗಳ ಸಂದರ್ಶನದ ನಂತರ ಸೂಕ್ತ  ವ್ಯಕ್ತಿಯ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಲಿದೆ.  

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತ ತಂಡದ ಭವಿಷ್ಯದ ರೂಪುರೇಷೆಯ ಕುರಿತು ಗೌತಮ್ ಅವರೊಂದಿಗೆ ಚರ್ಚೆ ನಡೆಸಲಾಯಿತು. ಅವರ ಅಭಿಪ್ರಾಯಗಳನ್ನು ಸಿಎಸಿ ಸದಸ್ಯರು ಆಲಿಸಿದರು. 

ಸಿಎಸಿಯು ಉತ್ತರ ವಲಯದ ಆಯ್ಕೆದಾರರ ಸ್ಥಾನಕ್ಕಾಗಿಯೂ ಕೆಲವು ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. 

42 ವರ್ಷದ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಈಚೆಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ ಟ್ರೋಫಿ ಗೆದ್ದಿತ್ತು. ಅವರು ಆ ತಂಡಕ್ಕೆ ಮೆಂಟರ್ ಆಗಿದ್ದರು. 

ವೆಸ್ಟ್ ಇಂಡೀಸ್ –ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿಯು ಮುಕ್ತಾಯವಾಗಲಿದೆ. 

ಟೂರ್ನಿಯ ಸೂಪರ್ 8ರ ಹಂತ ಪ್ರವೇಶಿಸಿರುವ ಭಾರತ ತಂಡವು ಇದೇ 20ರಂದು ಅಫ್ಗಾನಿಸ್ತಾನ ತಂಡದ ಎದುರು ಆಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.