ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಸಂದರ್ಶನವನ್ನು ಬಿಸಿಸಿಐನ ಕ್ರಿಕೆಟ್ ಸಲಹಾ ಮಂಡಳಿ (CAC) ಮಂಗಳವಾರ ನಡೆಸಿದೆ.
ಝೂಮ್ ಕರೆ ಮೂಲಕ ವರ್ಚುವಲ್ ವೇದಿಕೆಯಲ್ಲಿ ಗೌತಮ್ ಗಂಭೀರ್ ಪಾಲ್ಗೊಂಡರು. ಸಿಎಸಿ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಅವರು ಸಂದರ್ಶನ ನಡೆಸಿದರು.
ಈ ಕುರಿತು ಬಿಸಿಸಿಐ ಪ್ರತಿಕ್ರಿಯಿಸಿದ್ದು, ‘ಗಂಭೀರ್ ಅವರು ಸಿಎಸಿ ಎದುರು ಮಂಗಳವಾರ ಸಂದರ್ಶನಕ್ಕೆ ಹಾಜರಾಗಿದ್ದರು. ಒಂದು ಸುತ್ತಿನ ಮಾತುಕತೆ ಇಂದು ಮುಗಿದಿದೆ. ಬುಧವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.
‘ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ವಿಧಿಸಿದ್ದ ಷರತ್ತುಗಳನ್ನು ಪೂರೈಸುವ ಏಕೈಕ ಅಭ್ಯರ್ಥಿ ಗಂಭೀರ್ ಆಗಿದ್ದಾರೆ. ಹೀಗಾಗಿ ಅವರ ಹೆಸರೇ ಅಂತಿಮವಾಗಲಿದ್ದು, ಮುಂದಿನ 48 ಗಂಟೆಯೊಳಗಾಗಿ ಕೋಚ್ ಹುದ್ದೆಗೆ ಆಯ್ಕೆಯಾದವರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ’ ಎಂದೆನ್ನಲಾಗಿದೆ.
ಗಂಭೀರ್ ಅವರನ್ನು ಸಂದರ್ಶಿಸಿದ ತಂಡದಲ್ಲಿ ಅಶೋಕ್ ಮಲ್ಹೋತ್ರಾ ಅವರೊಂದಿಗೆ ಮಂಡಳಿಯ ಜತಿನ್ ಪರಾಂಜಪೆ ಹಾಗೂ ಸುಲಕ್ಷಣಾ ನಾಯ್ಕ್ ಇದ್ದರು. ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಐಸಿಸಿ ನಡೆಸುವ ಎಲ್ಲಾ ಬಗೆಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಗಂಭೀರ್ ಹೊಂದಿರುವ ಯೋಜನೆಗಳ ಕುರಿತಾಗಿ ಚರ್ಚೆ ನಡೆಯಿತು ಎಂದೆನ್ನಲಾಗಿದೆ.
‘ಮಂಗಳವಾರ ಸಂಜೆ ಬಿಸಿಸಿಐನ ಮುಖ್ಯ ಸಮಿತಿಯ ಸಭೆ ನಡೆಯಲಿದೆ. ಇದರಲ್ಲಿ ಕಾರ್ಯದರ್ಶಿ ಜಯ್ ಶಾ ಅವರು ಪಾಲ್ಗೊಳ್ಳಲಿದ್ದಾರೆ. ಅಂತಿಮ ಘೋಷಣೆಗೂ ಪೂರ್ವದಲ್ಲಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿಯೂ 42 ವರ್ಷದ ಗಂಭೀರ್ ಕೆಲಸ ಮಾಡಿದ್ದರು. ಸದ್ಯ ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತ ತಂಡವು ಸೂಪರ್ 8ರ ಹಂತ ತಲುಪಿದ್ದು, ಬಾರ್ಬೊಡಾಸ್‌ನಲ್ಲಿ ಬೀಡು ಬಿಟ್ಟಿದೆ. ಜೂನ್ 20ರಂದು ಆಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.