ADVERTISEMENT

ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್‌ ಸೂಕ್ತ: ಗಾವಸ್ಕರ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 19:30 IST
Last Updated 12 ಆಗಸ್ಟ್ 2019, 19:30 IST
ಸುನಿಲ್‌ ಗಾವಸ್ಕರ್‌
ಸುನಿಲ್‌ ಗಾವಸ್ಕರ್‌   

ನವದೆಹಲಿ (ಪಿಟಿಐ): ‘ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ರಿಷಭ್‌ ಪಂತ್‌ಗಿಂತಲೂ ಶ್ರೇಯಸ್‌ ಅಯ್ಯರ್‌ ಸೂಕ್ತ. ಈ ಕ್ರಮಾಂಕದಲ್ಲಿ ಆಡಲು ಶ್ರೇಯಸ್‌ಗೆ ಹೆಚ್ಚಿನ ಅವಕಾಶ ನೀಡಬೇಕು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ತಿಳಿಸಿದ್ದಾರೆ.

ಒಂದು ವರ್ಷದ ನಂತರ ತಂಡದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್‌, ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಭಾನುವಾರ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 68 ಎಸೆತಗಳಲ್ಲಿ 71 ರನ್‌ ಗಳಿಸಿದ್ದರು.

‘ಮಹೇಂದ್ರ ಸಿಂಗ್‌ ಧೋನಿ ಅವರು ಐದು ಅಥವಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದರು. ಜೊತೆಗೆ ‘ಉತ್ತಮ ಫಿನಿಷರ್‌’ ಕೂಡ ಆಗಿದ್ದರು. ರಿಷಭ್‌ ಅವರೂ ಧೋನಿಯಂತೆ ಐದನೇ ಕ್ರಮಾಂಕದಲ್ಲಿ ಆಡಿದರೆ ಒಳ್ಳೆಯದು’ ಎಂದು ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಅವರು 40ರಿಂದ 45ನೇ ಓವರ್‌ಗಳ ವರೆಗೂ ಆಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರೆ, ಅಂತಹ ಸಂದರ್ಭದಲ್ಲಿ ರಿಷಭ್‌ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕು. ಆಗ ಅವರು ಸ್ಫೋಟಕ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಬಹುದು. 30ರಿಂದ 35ನೇ ಓವರ್‌ ಒಳಗೆ ಅಗ್ರ ಕ್ರಮಾಂಕದ ಇಬ್ಬರು ಔಟಾದರೆ ಆಗ ಶ್ರೇಯಸ್‌ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು’ ಎಂದಿದ್ದಾರೆ.

‘ಸಿಕ್ಕ ಅವಕಾಶವನ್ನು ಶ್ರೇಯಸ್‌ ಚೆನ್ನಾಗಿ ಬಳಸಿಕೊಂಡರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನಾಯಕ ಕೊಹ್ಲಿ ಜೊತೆಗೂಡಿ ಉತ್ತಮ ಇನಿಂಗ್ಸ್‌ ಕಟ್ಟಿದರು. ಒತ್ತಡದ ಸನ್ನಿವೇಶದಲ್ಲೂ ಕಿಂಚಿತ್ತೂ ಎದೆಗುಂದದೆ ಆಡಿ ತಂಡದ ಮೊತ್ತವನ್ನು ಹೆಚ್ಚಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.